ಚಾಮರಾಜನಗರ : ಮನಿ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರಿಂದಲೇ ಪೊಲೀಸರನ್ನ ಹುಡುಕಾಟ ನಡೆಸುತ್ತಿರುವಂತಹ ಶಾಕಿಂಗ್ ಸುದ್ದಿಯಾಗಿದ್ದು ಚಾಮರಾಜನಗರದಲ್ಲಿ ವಂಚನೆ ಜಾಲ ಸಕ್ರೀಯವಾಗಿದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ.
ಚಾಮರಾಜನಗರದಲ್ಲಿ ವಿಶೇಷ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಬೇಲಿಯೇ ಎದ್ದು ಹೊಲವನ್ನ ಮೇಯ್ದ ರೀತಿ ಆರಕ್ಷಕ ಇಲಾಖೆ ತಲೆ ತಗ್ಗಿಸುವಂತಾಗಿದೆ, ನಿರ್ಗತಿಕರು ಬಡವರಿಗೆ ಅನ್ಯಾಯಕ್ಕೊಳಗಾದವರಿಗೆ ಆಶಾಕಿರಣವಾಗಬೇಕಿದ್ದ ಪೊಲೀಸರೇ ಕರಪ್ಸನ್ ಗೆ ಮುಂದಾಗಿ ಬರೋಬ್ಬರಿ 3.70 ಲಕ್ಷ ಹಣವನ್ನ ಪೀಕಿದ ನಾಲ್ವರ ತಂಡ ಈಗ ತಲೆ ಮರೆಸಿಕೊಂಡಿದ್ದು ತನ್ನ ಇಲಾಖೆಯ ಸಿಬ್ಬಂದಿಗಳಿಗಾಗಿ ಪೊಲೀಸರೇ ತಲಾಶ್ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ತಮಿಳುನಾಡು ಉದ್ಯಮಿಯಿಂದ ಹಣವನ್ನ ಪೀಕಿ ವಂಚಿಸಿದ್ದ ನಾಲ್ವರನ್ನ ಅಮಾನತುಗೊಳಿಸಿದ ಎಸ್ಪಿ ಡಾ.ಬಿ.ಟಿ ಕವಿತಾ ವಿಶೇಷ ತನಿಖಾ ತಂಡವನ್ನ ರಚಿಸಿದ್ದಾರೆ.
ಘಟನಾ ವಿವರ : ಮೂರು ತಿಂಗಳುಗಳ ಹಿಂದಷ್ಟೇ ಚಾಮರಾಜನಗರದ ಅನ್ಸಾರಿ ಎಂಬವನಿಗೆ ತಮಿಳುನಾಡಿನ ಸಚ್ಚಿದಾನಂದ ಎಂಬ ಉದ್ಯಮಿಯ ಪರಿಚಯವಾಗಿ ಇತ್ತೀಚೆಗೆ ಆತನಿಗೆ ಕರೆ ಮಾಡಿದ ಅನ್ಸಾರಿ ನಮ್ಮಲ್ಲಿ ಹಣವನ್ನ ಹೂಡಿಕೆ ಮಾಡಿದ್ದೆಯಾದಲ್ಲಿ ಕೆಲವೇ ದಿನಗಳಲ್ಲಿ ನೀವು ಹಾಕಿದ ಹಣವನ್ನ ಡಬಲ್ ಮಾಡಿಕೊಡಲಾಗುವುದು ಎಂದು ನಂಬಿಸಿ ಚಾಮರಾಜನಗರಕ್ಕೆ ಬರಲು ಆಹ್ವಾನ ನೀಡಿದ್ದಾನೆ ಎನ್ನಲಾಗಿದೆ.

ಅನ್ಸಾರಿ ಮಾತು ನಂಬಿದ ಸಚ್ಚಿದಾನಂದ 3 ಲಕ್ಷ ಹಣದೊಂದಿಗೆ ಚಾಮರಾಜನಗರಕ್ಕೆ ಬಂದಂತ ಸಂಧರ್ಭದಲ್ಲಿ ಹೋಟೆಲ್ ಡೆಲ್ಲಿ ದರ್ಬಾರ್ ನಲ್ಲಿ ಬಾಡಿಗೆ ಕೊಠಡಿ ಪಡೆದು ಅನ್ಸಾರಿಗಾಗಿ ಕಾಯುತ್ತಿದ್ದ ವೇಳೆ ಪೊಲೀಸರೆಂದು ಕೊಠಡಿ ಪ್ರವೇಶಿಸಿದ ನಾಲ್ವರು ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ನಿನ್ನನ್ನ ಬಂಧಿಸಿ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಪ್ರಚಾರಪಡಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಆತನ ಬಳಿಯಿದ್ದ ಮೂರು ಲಕ್ಷ ಹಣವನ್ನ ಕಿತ್ತುಕೊಳ್ಳುವ ಜೊತೆಗೆ ಇನ್ನೂ 1 ಲಕ್ಷ ಹಣ ಕೊಡುವಂತೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪವಿದೆ.
ಸ್ಥಳದಲ್ಲೇ ಸೈಯದ್ ಇಮ್ರಾನ್ ಎಂಬಾತನಿಗೆ 70 ಸಾವಿರ ವನ್ನ ಗೂಗಲ್ ಪೇ ಮಾಡಿಸಿ ಅಲ್ಲಿಂದ ತೆರಳಿದ್ದಾರೆ. ತನ್ನನ್ನ ಬೆದರಿಸಿದ ಪೊಲೀಸರ ಬಗ್ಗೆ ಅನುಮಾನ ಗೊಂಡ ಸಚ್ಚಿದಾನಂದ ಚಾಮರಾಜನಗರ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಪ್ರಕರಣ ಸೂಕ್ಶ್ಮತೆ ಅರಿತ ಎಸ್ಪಿ ಡಾ.ಬಿ.ಟಿ.ಕವಿತಾ ಹೋಟೆಲ್ ನಲ್ಲಿನ ಸಿಸಿಟಿವಿ ಕ್ಯಾಮರಗಳನ್ನ ಪರಿಶೀಲನೆ ನಡೆಸಿದ ವೇಳೆ ಪೊಲೀಸ್ ಇಲಾಖೆಯ ಓರ್ವ ಅಧಿಕಾರಿ ಹಾಗೂ ಸಿಬ್ಬಂದಿ ಭಾಗಿಯಾಗಿರುವ ಕುರಿತು ಖಾತ್ರಿಯಾಗಿದೆ. ಸೆನ್ ಸಬ್ ಇನ್ಸ್ಪೆಕ್ಟರ್ ಅಯ್ಯನಗೌಡ, ಪಟ್ಟಣ ಪೊಲೀಸ್ ಠಾಣೆಯ ಪೇದೆಗಳಾದ ಬಸವಣ್ಣ, ಮಹೇಶ್, ಮೋಹನ್ ಎಂಬವರು ಕೃತ್ಯದಲ್ಲಿ ಭಾಗಿಯಾಗಿರಿವುದು ಕಂಡುಬಂದಿದೆ.
ಘಟನಾ ಸಂಬಂದ ಪಟ್ಟಣ ಠಾಣೆ ಪೊಲೀಸರು ಅನ್ಸಾರಿ ಹಾಗೂ ಸೈಯದ್ ಇಮ್ರಾನ್ ನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ, ವಿಚಾರ ತಿಳಿಯುತ್ತಿದ್ದಂತೆ ಪಿಎಸ್ಐ ಅಯ್ಯನಗೌಡ, ಪೇದೆಗಳಾದ ಮಹೇಶ್, ಬಸವಣ್ಣ, ಮೋಹನ್ ತಲೆಮರೆಸಿಕೊಂಡಿದ್ದಾರೆ ಸದ್ಯ ನಾಲ್ವರ ಬಂಧನಕ್ಕೆ ವಿಶೇಷ ತಂಡವನ್ನ ರಚಿಸಲಾಗಿದೆ.

