ಚಾಮರಾಜನಗರ: ಕಾದಾಟದಲ್ಲಿ ಗಾಯಗೊಂಡಿದ್ದ ಗಂಡಾನೆಯೊಂದು ಸಾವನ್ನಪ್ಪಿರುವ ಘಟನೆ ಬಂಡೀಪುರ ಕುಂದುಕೆರೆ ವಲಯದ ಯಲಚೆಟ್ಟಿ ಶಾಖೆಯ ಕುಂದುಕೆರೆ ಗಸ್ತಿನ ಸಿದ್ದರಾಮನಕಟ್ಟೆ ಹಳ್ಳದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೃತ ಗಂಡಾನೆ ಸುಮಾರು 30ರಿಂದ35 ವರ್ಷ ಪ್ರಾಯದ್ದಾಗಿದೆ. ಇದರ ಕಾಲಲ್ಲಿ ಗಾಯದ ಗುರುತುಗಳು ಕಂಡು ಬಂದಿರುವುದರಿಂದ ಕಾದಾಟದಲ್ಲಿ ಗಾಯಗೊಂಡು ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ಗಸ್ತು ಮಾಡುತ್ತಿದ್ದಾಗ ಸಿದ್ದರಾಮನಕಟ್ಟೆ ಹಳ್ಳದಲ್ಲಿ ಗಂಡಾನೆಯ ಕಳೇಬರ ಪತ್ತೆಯಾಗಿತ್ತು. ಕೂಡಲೇ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ಎಸ್.ಪ್ರಭಾಕರನ್, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ, ಕುಂದುಕೆರೆ ವಲಯ ವಲಯ ಅರಣ್ಯಾಧಿಕಾರಿ ಮಲ್ಲೇಶ ಬಿ.ಎಂ., ಬಂಡೀಪುರ ಪಶುವೈದ್ಯಾಧಿಕಾರಿ ಮಿರ್ಜಾ ವಾಷಿಂ. ಉಪ ವಲಯ ಅರಣ್ಯಾಧಿಕಾರಿ ಮನೋಹರ.ಬಿ. ಸೇರಿದಂತೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದು, ಪಶುವೈದ್ಯಾಧಿಕಾರಿ ಮಿರ್ಜಾ ವಾಷಿಂ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಗಂಡಾನೆಯ ಸಾವಿಗೆ ಸಂಬಂಧಿಸಿದಂತೆ ಪಶುವೈದ್ಯಾಧಿಕಾರಿ ಮಿರ್ಜಾ ವಾಷಿಂ ಮಾಹಿತಿ ನೀಡಿ, ಮೃತ ಆನೆಯ ಮುಂದಿನ ಬಲಭಾಗದ ಕಾಲಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಆನೆಗಳ ಕಾದಾಟದಿಂದ ಗಾಯಗೊಂಡು ಸ್ವಾಬಾವಿಕವಾಗಿ ಮೃತ ಪಟ್ಟಿದೆ ಎಂದು ತಿಳಿಸಿದ್ದಾರೆ. ಇನ್ನು ಆನೆಯ ಎರಡು ದಂತಗಳನ್ನು ಸುರಕ್ಷಿತವಾಗಿ ಇಲಾಖೆ ವಶಕ್ಕೆ ಪಡೆದು, ಆನೆಯ ಮೃತದೇಹವನ್ನು ಪ್ರಕೃತಿಗೆ ಬಿಡಲಾಗಿರುತ್ತದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶರವರು ತಿಳಿಸಿದ್ದಾರೆ.

