ಚಾಮರಾಜನಗರ: ಹನೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಇಲ್ಲಿನ ಮಲೆಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ಈ ದಿನ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೇಡ ಗಂಪಣ ಸಂಪ್ರದಾಯದಂತೆ ರಥಕ್ಕೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ಸಮುದಾಯದ ಪುಟ್ಟ ಬಾಲಕಿಯರು ರಥಕ್ಕೆ ಬೆಲ್ಲದ ಆರತಿ ಬೆಳಗಿದರು. ಸಾಲೂರು ಬೃಹನ್ಮಠದ ಪೀಠಾಧಿಪತಿ ಸ್ವಾಮಿಗಳ ಹಾಗೂ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ರಥ ಮುಂಭಾಗ ಬೂದುಗುಂಬಳ ಕಾಯಿಯನ್ನು ಒಡೆಯುವ ಮೂಲಕ ಶಾಸಕ ಎಂಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಬೆಳಗ್ಗೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನೂರಾರು ಭಕ್ತರು ಉಘೇ ಮಾದಪ್ಪ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆದರು. ದೇವಾಲಯ ಆವರಣ ಸೇರಿದಂತೆ ಸುತ್ತಮುತ್ತ ನೆರೆದಿದ್ದ ಸಾವಿರಾರು ಭಕ್ತರು ಮೊಳಗಿಸಿದ ‘ಉಘೇ ಮಾದಪ್ಪ, ಉಘೇ ಮಾಯ್ಕಾರ.. ಉಘೇ ಉಘೇ..’ ಎಂಬ ಉದ್ಗಾರ ಬೆಟ್ಟದಾದ್ಯಂತ ಅನುರಣಿಸಿತು.
ಹೂವು,ಬಾಳೆ ಕಂದು, ಬಣ್ಣ ಬಣ್ಣಗಳ ವಸ್ತ್ರಗಳಿಂದ ಅಲಂಕೃತಗೊಂಡಿದ್ದ ರಥವು ದೇವಾಲಯದ ಸುತ್ತ ಒಂದು ಸುತ್ತು ಸಾಗಿತು. ರಥ ಸಾಗಿದ ಬಳಿಕ ಪಲ್ಲಕ್ಕಿ ಉತ್ಸವ ಜರುಗಿತು. ನವ ವಧುವರರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ರಥಕ್ಕೆ ಹಣ್ಣು ಜವನ, ಧವಸ ಧಾನ್ಯ, ನಾಣ್ಯಗಳನ್ನು ಎಸೆದು ಹರಕೆ ತೀರಿಸಿದರು. ರಥ ಸಾಗುವ ಹಾದಿಯಲ್ಲಿ ವಾದ್ಯಮೇಳ, ಛತ್ರಿ ಚಾಮರಗಳು, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಸಾಗಿ ಉತ್ಸವದ ಮೆರುಗು ಹೆಚ್ಚಿಸಿದವು.

