ಚಾಮರಾಜನಗರ: ಗ್ರಾಮಸ್ಥರಲ್ಲಿ ಭೀತಿಹುಟ್ಟಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದಿರರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್‌ಜೋನ್ ವ್ಯಾಪ್ತಿಯ ಅಣ್ಣೂರುಕೇರಿ ಗ್ರಾಮದಲ್ಲಿ ನಡೆದಿದೆ.

ಚಿರತೆ ಉಪಟಳ ಹೆಚ್ಚಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಣ್ಣೂರುಕೇರಿ ಗ್ರಾಮದ ರೈತ ರಂಗಶೆಟ್ಟಿ ಎಂಬುವವರ ಜಮೀನಿನಲ್ಲಿ ಬೋನನ್ನು ಇರಿಸಲಾಗಿತ್ತು. ಈ ಬೋನಿಗೆ ಸುಮಾರು 2ರಿಂದ 3 ವಯಸ್ಸಿನ ಗಂಡು ಚಿರತೆ ಬಿದ್ದಿದೆ. ಜಮೀನು ಮಾಲೀಕರು ಇದನ್ನು ಗಮನಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚಿರತೆ ಸೆರೆಸಿಕ್ಕಿರುವುದರಿಂದ ಅಣ್ಣೂರುಕೇರಿ, ಕೋಡಹಳ್ಳಿ ಸುತ್ತಮುತ್ತಲ ರೈತರು ನೆಮ್ಮದಿಯುಸಿರು ಬಿಟ್ಟಿದ್ದಾರೆ. ಈ ಚಿರತೆ ಜಮೀನುಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡು ಮೇಕೆ, ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿತ್ತು. ಇದರಿಂದ ರೈತರು ರಾತ್ರಿ ವೇಳೆ ಜಮೀನುಗಳಿಗೆ ಹೋಗಲು ಭಯಪಡುವಂತಾಗಿತ್ತು. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ನೀಡಿದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಬೋನು ಇರಿಸಲಾಗಿತ್ತು. ಸದ್ಯ ಚಿರತೆ ಸೆರೆಯಾಗಿರುವುದು ರೈತರಲ್ಲಿ ನೆಮ್ಮದಿ ತಂದಿದೆ.