ಚಾಮರಾಜನಗರ : ಹನೂರು ತಾಲೂಕಿನ ದೊಡ್ಡಆಲತ್ತೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಂಡಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಅಂಬೇಡ್ಕರ್ ಭವನ ನಿರ್ಮಾಣ ಮಾಡುಲು ಒತ್ತುವರಿ ಮಾಡಿಕೊಳ್ಳಲಾಗಿದ್ದ ಜಮೀನು ವಶಕ್ಕೆ ಪಡೆದ ಕಾರಣಕ್ಕೆ ಮನನೊಂದು ಮಹಿಳೆಯೋರ್ವಳು ನೇಣುಬಿಗಿದುಕೊಂಡು ಸಾವನ್ನಪ್ಪಿದ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದೊಡ್ಡ ಆಲತ್ತೂರಿನಲ್ಲಿ ನಡೆದಿದೆ ಎನ್ನಲಾಗಿದೆ.
52 ವರ್ಷದ ರಾಜಮ್ಮ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು ರಾಜಮ್ಮರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ ಭೂಮಿ ಬಂದಿತ್ತು. ಇದ್ದ ಚೂರುಪಾರು ಭೂಮಿಯಲ್ಲಿ ಕುಟುಂಬ ವ್ಯವಸಾಯ ಮಾಡಿ ಜೀವನ ನಡೆಸುತ್ತಿದರು , ಕಳೆದವಾರ ಇದ್ದಕ್ಕಿದ್ದ ಹಾಗೆ ಬಂದ ಕಂದಾಯ ಇಲಾಖೆಯ ಅಧಿಕಾರಿಗಳು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 20 ಸೆಂಟ್ ಭೂಮಿ ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು. ಇದರಿಂದ ಮನನೊಂದ ರಾಜಮ್ಮ ಇಂದು ಮುಂಜಾನೆ ತಮ್ಮ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ.
ರಾಜಮ್ಮರ ಶವವಿಟ್ಟು ಪ್ರತಿಭಟನೆ:
ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ರಾಜಮ್ಮರ ಶವವನ್ನಿಟ್ಟು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.ರಾಜಮ್ಮರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ ಜಮೀನು ಬಂದಿತ್ತು, ಆ ಭೂಮಿಯಲ್ಲಿ ಅವರ ಕುಟುಂಬ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು.
ಆದರೆ ಅಧಿಕಾರಿಗಳು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ರಾಜಮ್ಮರ 20 ಸೆಂಟ್ ಭೂಮಿಯನ್ನು ವಶಪಡಿಸಿಕೊಂಡಿರುವುದು ಖಂಡನೀಯ, ರಾಜಮ್ಮರ ಸಾವಿಗೆ ಅಧಿಕಾರಿಗಳೆ ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಯಾವುದೇ ಕಾರಣಕ್ಕೂ ಶವವನ್ನು ತೆಗೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

