ಚಾಮರಾಜನಗರ : ಕೆ.ಆರ್.ಎಸ್. ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡಲಾಗಿದೆ, ನದಿ ಪಾತ್ರದಲ್ಲಿ ಹರಿಯುವ ನೀರು ಕರ್ನಾಟಕದಿಂದ ತಮಿಳುನಾಡಿಗೆ ಸೇರುತ್ತಿದೆ.
ಇದರಿಂದ ರಾಜ್ಯದಲ್ಲಿನ ಕೃಷಿಕರಿಗೆ ಅನುಕೂಲವಾಗುತ್ತಿಲ್ಲ. ಇದರ ಬದಲು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನವಾದರೆ ರೈತರ ಬದುಕು ಹಸನಾಗಲಿದೆ ಎಂದು ಭಾರತೀಯ ಕಿಸಾನ್ ಸಂಘದ ಹನೂರು ಘಟಕ ಪ್ರತಿಭಟನೆ ನಡೆಸಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿರುವ ತಹಸೀಲ್ದಾರ್ ಕಛೇರಿಯ ಮುಂದೆ ಭಾರತೀಯ ಕಿಸಾನ್ ಹನೂರು ಘಟಕದ ಕಾರ್ಯಕರ್ತರು ಜಮಾಯಿಸಿ, ಕಾವೇರಿ ಕೊಳ್ಳದಲ್ಲಿ ಹರಿಯುತ್ತಿರುವ ನೀರನ್ನು ಕೃಷಿ ಭೂಮಿಗೆ ಹರಿಸಬೇಕು, ಇಕ್ಕೆ ಕಾವೇರಿ ನೀರಾವರಿ ನಿಗಮದ ಇಂಜನೀಯರ್ ಗಳು ವಿಶೇಷ ಯೋಜನೆ ಸಿದ್ದಪಡಿಸಿಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಾವೇರಿ ನದಿ ಪಾತ್ರದಲ್ಲಿ ಹೆಚ್ಚುವರಿ ನೀರು ಸದ್ದು ಗದ್ದಲವಿಲ್ಲದೆ ತಮಿಳುನಾಡು ಪಾಲಾಗುತ್ತಿದೆ. ಇದನ್ನು ಮನಗಂಡು ಸರ್ಕಾರವು ಕರ್ನಾಟಕ ಕೃಷಿಕರಿಗೆ ಅನುಕೂಲವಾಗುವಂತೆ ಯೋಜನೆ ಅನುಷ್ಠಾನಕ್ಕೆ ತರಬೇಕೆಂದು ರೈತರು ಆಗ್ರಹಿಸಿ ಧರಣಿ ನಡೆಸಿದರು.

