ಚಾಮರಾಜನಗರ : ಹಸಮಣೆ ಏರಬೇಕಿದ್ದ ವರನಿಗೆ ದುಷ್ಕರ್ಮಿಗಳು ಚಾಕು ಇರಿದ ಹಿನ್ನೆಲೆ ನಿಶ್ಚಯವಾಗಿದ್ದ ಮದುವೆ ನಿಂತು ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಬೇಕಿದ್ದ ವಿವಾಹಕ್ಕೆ ದುಷ್ಕರ್ಮಿಗಳು ಕೊಡಲಿ ಇಟ್ಟಿದ್ದಾರೆ. ಗುರುವಾರ ರಾತ್ರಿಯೇ ವರನ ಮೇಲೆ ಚಾಕು ಇರಿದು ಕೊಲೆ ಯತ್ನ ಮಾಡಿದ ಹಿನ್ನೆಲೆ ಮದುವೆ ರದ್ದಾಗಿದೆ.

ರವೀಶ್ ಎಂಬ ವರ ಕೊಳ್ಳೇಗಾಲ ತಾಲ್ಲೂಕಿನ ಕುಣಿಗಳ್ಳಿಯಿಂದ ಕಾರಿನಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸುತ್ತಿದ್ದಂತೆ 4-5 ಜನರಿದ್ದ ಗುಂಪೊಂದು ಕಾರಿನಲ್ಲಿ ಬಂದು ಎಂಜಿಎಸ್ವಿ ಕಾಲೇಜು ರಸ್ತೆಯಲ್ಲಿ ಅಟ್ಯಾಕ್ ಮಾಡಿ ಕಾರಿನಲ್ಲಿದ್ದ ವರನಿಗೆ ಇರಿದು ಹಲ್ಲೆ ಮಾಡಿದ್ದಾರೆ.

ಈ ವೇಳೆ ಆತನ ಸಂಬಂಧಿಕರು ಕೂಗಿಕೊಂಡಾಗ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ತಕ್ಷಣವೇ ವರನನ್ನ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರತಂದು ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.