ಚಾಮರಾಜನಗರ: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ತವರಲ್ಲಿ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಮಾಡುವುದರ ಮೂಲಕ ಲಕ್ಷಾಂತರ ಜನರ ಮುಂದೆ ನಿಂತು ಗೌಡರ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದ ಸಿಎಂ ಸಿದ್ದರಾಮಯ್ಯರನ್ನು ಕೊಳ್ಳೇಗಾಲದಲ್ಲಿ ಜೆಡಿಎಸ್ ಶಾಸಕ ಎಂ.ಆರ್. ಮಂಜುನಾಥ್ ಹೊಗಳಿ ಅಟ್ಟಕ್ಕೇರಿಸುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಶನಿವಾರ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಹಾಡಿ ಹೊಗಳಿರುವುದು ಚರ್ಚೆಗೆ ಗ್ರಾಸವಾಗಿದೆ,
ಈಗಾಗಲೇ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ದ ನಿತ್ಯ ಆರೋಪ ಮಾಡುತ್ತಿರುವ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ಕಾರ್ಯಕದಲ್ಲಿ ಜೆಡಿಎಸ್. ಶಾಸಕ ಹಾಡಿ ಹೊಗಳಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಶಿಕ್ಷಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಆದ್ಯತೆ ನೀಡಿ ಮಕ್ಕಳ ಪೌಷ್ಠಿಕತೆಯ ಬಗ್ಗೆಯೂ ಯೋಚನೆ ಮಾಡುತ್ತಾರೆ, ಸರ್ಕಾರೀ ಶಾಲೆಯಲ್ಲಿ ಓದಿ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಮುಖ್ಯಮಂತ್ರಿಯವರಿಗೆ ಈ ಶಾಲೆಗಳಲ್ಲಿ ಓದುವ ಮಕ್ಕಳ ಬವಣೆ ಚೆನ್ನಾಗಿ ಗೊತ್ತು, ಅವರ ಸಮಗ್ರ ಬೆಳವಣಿಗೆಗೆ ಸಿದ್ದರಾಮಯ್ಯ ತೆಗೆದುಕೊಂಡಿರುವ ನಿರ್ಣಯಗಳು ಶ್ಲಾಘನೀಯ ಎಂದು ಹೇಳುವ ಮೂಲಕ ನೆರೆದವರು ಹುಬ್ಬೇರಿಸುವಂತೆ ಮಾಡಿದ್ದಾರೆ. ಮುಂದೇನಾಗುತ್ತೋ ಕಾದು ನೋಡಬೇಕಾಗಿದೆ.

