ಗುಂಡ್ಲುಪೇಟೆ: ಪಟ್ಟಣದ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ನೂರಾರು ಕೋಟಿ ಹಣವನ್ನ ವ್ಯಯಿಸುತ್ತಿದ್ದರೆ ಇತ್ತ ಅಧಿಕಾರಿಗಳ ಬೇಜವಬ್ದಾರಿ ತನಕ್ಕೆ ಸಾರ್ವಜನಿಕರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ. ಇಷ್ಟಕ್ಕೆಲ್ಲಾ ಕಾರಣ ಕಾಮಗಾರಿ ನಡೆಸುವ ವೇಳೆ ಕೊಳಚೆ ನೀರು ಹರಿದುಹೋಗುವ ಚರಂಡಿಯೊಳಗೆ ಕುಡಿಯುವ ನೀರಿನ ಪೈಪ್ ಅಳವಡಿಸಿರೋದು, ಅಧಿಕಾರಿಗಳ ನಡೆಯನ್ನ ಖಂಡಿಸಿದ ನಮ್ಮ ಕರ್ನಾಟಕ ಸೇನೆ ಪಧಾಧಿಕಾರಿಗಳು ಛೀಮಾರಿ ಹಾಕಿದ್ದಾರೆ.
ಪಟ್ಟಣ ನಾಗರಿಕರಿಗೆ ಕುಡಿಯುವ ನೀರಿನ ಅಭಾವ ನೀಗಿಸಲು ಕಬಿನಿ ಮೂಲದಿಂದ ನೀರು ಸರಬರಾಜು ಮಾಡಲು ಕೋಟ್ಯಾಂತರ ರೂ ಸಾರ್ವಜನಿಕರ ತೆರಿಗೆ ಹಣವನ್ನ ವ್ಯಯ ಮಾಡಲಾಗಿದೆ ಆದರೆ ಗುಣಮಟ್ಟದ ಕಾಮಗಾರಿ ನಡೆಸದ ಇಲಾಖೆ ಕೊಳಚೆ ನೀರು ಹರಿದುಹೋಗುವ ಒಳಚರಂಡಿ ಬದಿಯಲ್ಲೇ ಪೈಪ್ ಅಳವಡಿಸುತ್ತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಚಾಮರಾಜನಗರ ಜೋಡಿ ರಸ್ತೆಯಲ್ಲಿ ಕೊಳಚೆ ನೀರು ಹರಿದುಹೋಗುವ ಒಳಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿಯನ್ನರಿತ ನಮ್ಮ ಕರ್ನಾಟಕ ಸೇನೆ ಚಾಮರಾಜನಗರ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಹಾಗೂ ತಾ.ಅಧ್ಯಕ್ಷ ಶ್ರೀನಿವಾಸ್ ನಾಯಕ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ನೀರು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದರು.

