ಗುಂಡ್ಲುಪೇಟೆ: ಅಕ್ರಮವಾಗಿ ನಾಡ ಬಂದೂಕುಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, 3 ಬಂದೂಕು, 18 ಕಾರ್ಟ್ರಿಜ್‌ ಗುಂಡುಗಳು, ಎರಡು ಚಾಕುಗಳು ಹಾಗೂ ಒಂದು ಕಾರನ್ನು ತೆರಕಣಾಂಬಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಜು.17ರ ಶುಕ್ರವಾರ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಗೂರು ಗ್ರಾಮದ ಕುಮಾರಪ್ಪ, ಸುನೀಲ್, ದಿನೇಶ್ ಮತ್ತು ಕಾಂತ ಬಂಧಿತ ಆರೋಪಿಗಳು. ಇವರು ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ನಾಡ ಬಂದೂಕುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ತೆರಕಣಾಂಬಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಜವರೇಗೌಡ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಪೊಲೀಸ್ ಠಾಣೆ ಮುಂದೆ ಮಾರುತಿ ಓಮ್ನಿ ಕಾರು ತಡೆದು ಪರಿಶೀಲನೆ ನಡೆಸಿದ ವೇಳೆ ವಾಹನದಲ್ಲಿ 2 ಒಂಟಿ ನಳಿಕೆಯ ಬಂದೂಕುಗಳು, 1 ನಾಡ ಬಂದೂಕು, ಪ್ಲಾಸ್ಟಿಕ್ ಕವರ್‌ನಲ್ಲಿದ್ದ 18 ಕಾರ್ಟ್ರಿಜ್‌ ಗುಂಡುಗಳು ಹಾಗೂ 2 ಕಬ್ಬಿಣದ ಚಾಕುಗಳು ಪತ್ತೆಯಾಗಿವೆ. ತಕ್ಷಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂಬಂಧ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.