ಚಾಮರಾಜನಗರ: ಅಕ್ರಮವಾಗಿ ಹುಲಿ ಉಗುರು ಸಾಗಿಸುತ್ತಿರುವ ಪ್ರಕರಣವನ್ನು ಪತ್ತೆಹಚ್ಚಿ ಇಬ್ಬರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲ ‌ಹನೂರು ಮುಖ್ಯರಸ್ತೆಯಲ್ಲಿನ ಲೊಕ್ಕನಹಳ್ಳಿ ಬಳಿ ನಡೆದಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡ ಹರವೆ ಗ್ರಾಮದ ನವೀನ್ ಕುಮಾರ್ (24), ಹೆಚ್.ಡಿ ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದ ಕುಮಾರನಾಯಕ (32) ಬಂಧಿತರು. ಆರೋಪಿಗಳು ನಾಲ್ಕು ಹುಲಿ ಉಗುರುಗಳನ್ನಿಟ್ಟುಕೊಂಡು ಅದನ್ನು ಬೈಕ್ ನಲ್ಲಿ ಕೊಳ್ಳೇಗಾಲ-ಹನೂರು ಮುಖ್ಯ ರಸ್ತೆಯಿಂದ ಲೊಕ್ಕನಹಳ್ಳಿ ಕಡೆಗೆ ಹೋಗುವ ರಸ್ತೆಯ ಜಂಕ್ಷನ್ ಬಳಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರು.

ಈ ವೇಳೆ ಖಚಿತ ಮಾಹಿತಿ ಮೇರೆಗೆ ಮಡಿಕೇರಿಯ ಸಿಐಡಿ ಅರಣ್ಯ ಸಂಚಾರಿ ಘಟಕ ಪೊಲೀಸ್ ಅಧೀಕ್ಷಕ ಎಸ್ ಎಸ್ ಕಾಶಿ ಅವರ ಮಾರ್ಗದರ್ಶನದಲ್ಲಿ ಸಿಐಡಿ ಅರಣ್ಯ ಸಂಚಾರಿ ದಳ ಕೊಳ್ಳೇಗಾಲದ ಪಿಎಸ್ಐ ವಿಜಯ್ ರಾಜ್ ‌ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಅವರ ಬಳಿ ನಾಲ್ಕು ಹುಲಿ ಉಗುರು ಇರುವುದು ಪತ್ತೆಯಾಗಿದೆ.

ಕೂಡಲೇ ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ ಹುಲಿ ಉಗುರನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ‌ ಅರಣ್ಯಸಂಚಾರಿ ದಳದ ಸಿಬ್ಬಂದಿ ಶಂಕರ್, ಬಸವರಾಜು, ರಾಮಚಂದ್ರ ಸ್ವಾಮಿ, ಲತಾ ಬಸವರಾಜು, ಚಾಲಕ ಪ್ರಭಾಕರ್ ಭಾಗವಹಿಸಿದ್ದರು