ಚಾಮರಾಜನಗರ: ದಕ್ಷಿಣಕನ್ನಡ ಜಿಲ್ಲೆ ಹೊರತು ಪಡಿಸಿ ಬೇರೆಡೆ ಸೇಂದಿ ಇಳಿಸುವುದನ್ನು ನಿಷೇಧಿಸಲಾಗಿದ್ದು, ಇದನ್ನು ಇಳಿಸುವುದು ಮತ್ತು ಸಂಗ್ರಹಿಸಿಡುವುದು ಅಪರಾಧವಾಗಿದೆ. ಇದೀಗ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಉಮ್ಮತ್ತೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 82 ಲೀಟರ್ ಸೇಂದಿ ದೊರೆತಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಕುಮಾರ್ ಹಾಗೂ ಕೊಳತ್ತೂರು ಬಂಧಿತರು ಇವರು ಉಮ್ಮತ್ತೂರು ಗ್ರಾಮದ ನಿವಾಸಿ ಪುಟ್ಟಣ್ಣ ಎಂಬುವರ ತೋಟದಲ್ಲಿ ಅಕ್ರಮವಾಗಿ ಸುಮಾರು 82 ಲೀಟರ್ ಸೇಂದಿಯನ್ನು ಇಳಿಸಿ ಅದನ್ನು ಸಂಗ್ರಹಿಸಿಟ್ಟು ಮಾರಾಟ ಮಾಡಲು ತಯಾರಿ ನಡೆಸಿದ್ದರು ಎಂದು ಹೇಳಲಾಗಿದೆ.
ತೋಟದಲ್ಲಿ ಸೇಂದಿ ಸಂಗ್ರಹಿಸಿಟ್ಟಿರುವ ಮಾಹಿತಿ ಅರಿತ ಕುದೇರು ಪೊಲೀಸ್ ಠಾಣೆಯ ಪಿಎಸ್ ಐ ಕುಮದಾ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ನಾಗನಾಯಕ, ಉಮೇಶ್ ಹಾಗೂ ವಿಜಯಕುಮಾರ ದಾಳಿ ನಡೆಸಿ ಆರೋಪಿ ಕುಮಾರ್ ಬಿನ್ ಪಳನಿಸ್ವಾಮಿ ಹಾಗೂ ಕೊಳತ್ತೂರು ಎಂಬುವರನ್ನು ವಶಕ್ಕೆ ತಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

