ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಬೇಡಗುಳಿ ಸಮೀಪದ ರಾಮಯ್ಯನಪೋಡಿನ ನಿವಾಸಿ ರವಿ ರವರ ಮೇಲೆ 9 ವರ್ಷದ ಹೆಣ್ಣು ಹುಲಿ ದಾಳಿ ನಡೆಸಿದ ಪರಿಣಾಮ ತೀವ್ರ ಸ್ವರೂಪದ ಗಾಯಗೊಂಡಿದ್ದು, ಅವರನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಂಗಳವಾರ ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ರಂಗಮ್ಮಳ ಮೇಲೆ ಅದೇ ಹುಲಿ ದಾಳಿ ನಡೆಸಿದ ಪರಿಣಾಮ ರಂಗಮ್ಮ ಸಾವನ್ನಪ್ಪಿದ್ದಾರೆ. ಇಲಾಖೆಯ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ 80 ಮಂದಿ ಸಿಬ್ಬಂದಿಗಳ ಸಹಕಾರದೊಂದಿಗೆ ಭೀಮ, ಗಜೇಂದ್ರ , ಶ್ರೀಕಂಠ ಹಾಗೂ ಮತ್ತೊಂದು ಸಾಕಾನೆ ಸೇರಿದಂತೆ ನಾಲ್ಕು ಆನೆಗಳಿಂದ ಕಾರ್ಯಚರಣೆ ನಡೆಸಿ ಬೇಡಗುಳಿಯಿಂದ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಹೆಣ್ಣು ಹುಲಿಯನ್ನು ಸೆರೆ ಹಿಡಿಯಲಾಗಿದೆ.

ಹುಲಿ ದಾಳಿಯಿಂದ ಕಂಗಲಾಗಿರುವ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ಅವರು ವಾಸ ಮಾಡುವ ಕಡೆ ಇಲಾಖೆಯ ಸಿಬ್ಬಂದಿಗಳ ಗಸ್ತು ಕಾರ್ಯ ಹೆಚ್ಚಿಸಲಾಗುವುದು ಎಂದು ಅರಣ್ಯ ಇಲಾಖೆಯ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹಿರಲಾಲ್ ತಿಳಿಸಿದರು. ಹುಲಿ ದಾಳಿಯಿಂದ ಮೃತಪಟ್ಟ ರಂಗಮ್ಮ ರವರ ಕುಟುಂಬಸ್ಥರಿಗೆ ಇಲಾಖೆಯಿಂದ ಪರಿಹಾರ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ರವರಿಗೆ ಚಿಕಿತ್ಸಾ ವೆಚ್ಚವನ್ನು ಇಲಾಖೆಯಿಂದಲೇ ಭರಿಸಲಾಗುತ್ತಿದೆ.