ಚಾಮರಾಜನಗರ : ದೇವರನಾಡು ಕೇರಳದಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರವಾಹ ಪ್ರಕರಣದಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದು, ಎರಡೂವರೆ ವರ್ಷದ ಬಾಲಕ ಸೇರಿ ನಾಲ್ವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಬಹುತೇಕ ದುರಂತ ನಡೆದ ಸ್ಥಳದಲ್ಲಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಚಾಮರಾಜನಗರ ಜಿಲ್ಲೆಯ ಪುಟ್ಟಸಿದ್ದಶೆಟ್ಟಿ (62), ರಾಣಿ ಮದರ್ (50 ) ಮೃತಪಟ್ಟವರು. ಇವರ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಚಾಮರಾಜನಗರ ತಾಲೂಕಿನ ರಾಜನ್ (50) ಮತ್ತು ರಜನಿ (45) ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಇನ್ನು ಗುಂಡ್ಲುಪೇಟೆ ತಾಲೂಕಿನ ತ್ರಿಯಾಂಬಕಪುರದ ಸ್ವಾಮಿ ಶೆಟ್ಟಿ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ವೈನಾಡು ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ.

