ಚಾಮರಾಜನಗರ: ಹನೂರು ತಾಲ್ಲೂಕಿನಲ್ಲಿ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯ,  ಶಿರಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಇವಾಗ ಕುಡುಕರ ತಾಣವಾಗಿದೆ.

ಶಾಲೆಯಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ ಶಿರಗೋಡು ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಕಟ್ಟಡ ಇದೀಗ ಮದ್ಯಪಾನಿಗಳ ತಾಣವಾಗಿ ಮಾರ್ಪಟ್ಟಿದೆ.

ಮಕ್ಕಳ ದಾಖಲಾತಿ ಕಡಿಮೆಯಾಗಿ ಕ್ರಮೇಣ ಸರ್ಕಾರಿ ಶಾಲೆಯನ್ನು ಮುಚ್ಚಿ ರುವುದರಿಂದ ಇದೀಗ ಕಟ್ಟಡ ನಿರುಪಯುಕ್ತವಾಗಿದ್ದು, ಪಾಳು ಕೊಂಪೆಯಂತಾಗಿದೆ. ಕಿಟಕಿ ಬಾಗಿಲು ಇಲ್ಲದೆ ಅನಾಥವಾಗಿದ್ದು, ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಶಾಲಾ ಕೊಠಡಿಗಳಲ್ಲಿ ಬಿಯರ್ ಬಾಟಲಿಗಳು ಹಾಗೂ ಇನ್ನಿತರ ಮದ್ಯದ ಬಾಟಲಿಗಳು, ಪೌಚ್‌ಗಳು ಕಣ್ಣಿಗೆ ರಾಚುತ್ತಿವೆ.

ಅಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಅನೇಕ ಮದ್ಯದ ಬಾಟಲಿಗಳು ಬಿದ್ದಿರುವುದನ್ನು ಗಮನಿಸಿದರೆ ಈ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಯಾವುದೇ ಅಳುಕಿಲ್ಲದೆ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. ಸಂಬಂಧಪಟ್ಟ ಅಬಕಾರಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಿರುಪಯುಕ್ತವಾಗಿರುವ ಶಾಲೆಯ ಕೊಠಡಿಯಲ್ಲಿ ಮುಚಿರುವ ಸರ್ಕಾರಿ ಶಾಲೆಗಳು ವರ್ಷಗಳೇ ಕಳೆದಿವೆ. 2017-2018ರ ಸಾಲಿನಲ್ಲೇ ಮಕ್ಕಳಿಲ್ಲ ಎಂಬ ಕಾರಣಕ್ಕೆ ಶಾಲೆಯನ್ನು ಮುಚ್ಚಲಾಗಿತ್ತು. ಇದೀಗ ಹನೂರು ತಾಲ್ಲೂಕಿನಲ್ಲಿ ಶಿರಗೋಡು ಸೇರಿದಂತೆ ಸುಂಟರದೊಡ್ಡಿ, ದೊಡ್ಡ ಮಾಲಾಪುರ, ಚಿಕ್ಕಾಲತ್ತೂರು, ಇನ್ನಿತರ ಶಾಲೆಗಳು ಸಹ ಮುಚ್ಚುವ ಹಂತಕ್ಕೆ ಬಂದಿವೆ.

ಒಂದು ಒಳ್ಳೆಯ ಗ್ರಂಥಾಲಯವನ್ನು ತೆರೆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ನಮ್ಮ ಮನವಿಯನ್ನು ಪುರಸ್ಕರಿಸಿ ಇದೇ ಕೊಠಡಿಯಲ್ಲಿ ಗ್ರಂಥಾಲಯ ತೆರೆಯಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.