ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣದ ಹೊರವಲಯದ ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಜೆಸಿಬಿಗಳ ಗರ್ಜನೆ ಕೇಳಿ ಬಂದಿದ್ದು ಸರ್ಕಾರದ ಮಾಲಿಕತ್ವದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ರೈತ ಕುಟುಂಬದ ವಿರುದ್ಧ ಅಧಿಕಾರಿಗಳು ಭಾರೀ ಕಾರ್ಯಾಚರಣೆ ನಡೆಸಿ, ಸುಮಾರು ₹30 ಕೋಟಿ ಮೌಲ್ಯದ 14 ಎಕರೆ ಜಮೀನನ್ನು ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಕಾರ್ಯಾಚರಣೆ ತಹಸೀಲ್ದಾರ್ ವೈಕೆ ಗುರುಪ್ರಸಾದ್, ರಾಜಸ್ವ ನಿರೀಕ್ಷಕ ಶೇಷಣ್ಣ ಮತ್ತು ಹನೂರು ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಮೂರ್ತಿ ನೇತೃತ್ವದಲ್ಲಿ ನಡೆಯಿತು.

ಈ ವೇಳೆ ಸರ್ವೆ ಸಂಖ್ಯೆ 355/1 – 5.50 ಎಕರೆ,ಸರ್ವೆ ಸಂಖ್ಯೆ 356/A 5.95 ಎಕರೆ,ಸರ್ವೆ ಸಂಖ್ಯೆ 356/C 2.58 ಎಕರೆ ಒಟ್ಟಾರೆ 14.03 ಎಕರೆ ಜಾಗವನ್ನು ವಿಶ್ವೇಶ್ವರ ಪ್ರಸಾದ್ ಎಂಬಾತ ತನ್ನ ವಶಕ್ಕೆ ಪಡೆದಿದ್ದಾನೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಸ್ಥಳದಲ್ಲೇ ಜೆಸಿಬಿಗಳ ಮೂಲಕ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಿದರು.

ಈ ಭದ್ರತಾ ಕಾರ್ಯಾಚರಣೆಯಲ್ಲ 20ಕ್ಕೂ ಹೆಚ್ಚು ಕಂದಾಯ ಇಲಾಖೆಯ ಅಧಿಕಾರಿಗಳು 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಪಟ್ಟಣ ಪಂಚಾಯತ್ ಮತ್ತು ಆರೋಗ್ಯ ಇಲಾಖೆಗಳ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.