ಚಾಮರಾಜನಗರ : ಹುಲಿಗಳ ಜಿಲ್ಲೆಯಲ್ಲಿ ಒಂದೇ ದಿನ ಐದು ಹುಲಿಗಳ ಮೃತ ದೇಹ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಲೆನೋವುಂಟಾಗಿದೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಮೀಣ್ಯಂ ಗಸ್ತಿನ ಗಾಜನೂರು ಬಳಿ ಗುರುವಾರ ಐದು ಹುಲಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಮಲೆ ಮಹದೇಶ್ವರ ವನ್ಯ ಜೀವಿಧಾಮದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದರೂ ಸಹ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗಿದ್ದರೆ ಹುಲಿಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗುತ್ತಿತ್ತು.

ರಾಜಕಾರಣಿಗಳ ಹುನ್ನಾರದಿಂದಾಗಿ ಮಲೆ ಮಹದೇಶ್ವರ ವನ್ಯ ಜೀವಿಧಾಮ ಹುಲಿ ಸಂರಕ್ಷಿತ ಪ್ರದೇಶವಾಗದೇ ಇರುವುದು ಹುಲಿಗಳ ಸಾವಿಗೆ ಕಾರಣವಾಗಿದೆ ಎಂದು ಪರಿಸರ ಪ್ರೇಮಿಗಳು ಮತ್ತು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರು ಹುಲಿಗಳ ಸಾವಿಗೆ ಆತಂಕ ವ್ಯಕ್ತಪಡಿಸಿದ್ದು, ಹುಲಿಗಳ ಸಾವಿಗೆ ಕಾರಣ ಏನೆಂದು ಅಧಿಕಾರಿಗಳು ತನಿಖೆಯಿಂದ ತಿಳಿಯಬೇಕಾಗಿದೆ, ಹಾಗೂ ಹುಲಿಗಳ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವಾಗಿದ್ದರೆ ಅವರುಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.