ಗುಂಡ್ಲುಪೇಟೆ : ಬಿಜೆಪಿ ಚಿಹ್ನೆಯಡಿ ಗೆಲುವು ಸಾಧಿಸಿ ಅಧಿಕಾರದಾಹದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದ ಐವರು ಸದಸ್ಯರು ತಮ್ಮ ಸದಸ್ಯತ್ವದಿಂದ ಅನರ್ಹಗೊಳ್ಳುವ ಮೂಲಕ ಮುಖಭಂಗಕ್ಕೊಳಗಾಗಿದ್ದಾರೆ.
ಪಕ್ಷವಿರೋಧಿತನ ತೋರಿದ್ದಲ್ಲದೆ ನಮ್ಮನ್ನ ಏನು ಮಾಡಲಾಗದು ಎಂದು ತೊಡೆತಟ್ಟಿದ್ದ ಐದು ಮಂದಿ ಸದಸ್ಯರು ಎರಡು ಬಾರಿ ನಡೆದ ಪುರಸಭಾ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೆ ಅಪಹಾಸ್ಯಕ್ಕೆ ತುತ್ತಾಗಿರುವುದು ಹೋರಾಟಕ್ಕೆ ಮತ್ತು ನ್ಯಾಯಕ್ಕೆ ಸಂದ ಜಯವಾಗಿದೆ ಎಂದು ಪುರಸಭೆ ವಿಪಕ್ಷ ನಾಯಕ ಹಾಗೂ ಮಾಜಿ ಅಧ್ಯಕ್ಷ ಪಿ.ಗಿರೀಶ್ ಲೇವಡಿ ಮಾಡಿದರು.

ಸೆ.4 – 2024 ರಲ್ಲಿ ಪಟ್ಟಣ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳದೆ ವಿಪ್ ಉಲ್ಲಂಘನೆ ದೃಢಪಟ್ಟ ಹಿನ್ನೆಲೆ ಬಿಜೆಪಿಯ ಐವರ ಸದಸ್ಯತ್ವವನ್ನ ಅನಾರ್ಹಗೊಳಿಸಲು ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದರು.
ಜಿಲ್ಲಾಧಿಕಾರಿಗಳ ಆದೇಶವನ್ನ ಉಚ್ಚನ್ಯಾಯಾಲಯ ಎತ್ತಿಹಿಡಿದ ಹಿನ್ನೆಲೆ ಪಕ್ಷಾಂತರ ಮಾಡಿದ್ದ ಕಿರಣ್ ಗೌಡ, ರಾಣಿಲಕ್ಷ್ಮೀದೇವಿ, ಹೀನಾ ಕೌಶರ್, ವೀಣಾ ಮಂಜುನಾಥ್, ರಮೇಶ್ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಪಕ್ಷ ವಿರೋಧಿತನ ತೋರುವ ಮೂಲಕ ಸವಾಲು ಹಾಕಿದ್ದವರು ಇಂದು ಅಪಮಾನಕ್ಕೀಡಾಗಿ ಬೀದಿಗೆ ಬಿದ್ದಿದ್ದಾರೆ ಎಂದು ಸೋಮವಾರ ಪಟ್ಟಣ ಪುರಸಭಾ ಆವರಣದಲ್ಲಿ ಪತ್ರಿಕಾ ಮಾದ್ಯಮದವರೊಟ್ಟಿಗೆ ಮಾತನಾಡುತ್ತ ಟಾಂಗ್ ಕೊಟ್ಟರು.

ಅಂದಿನ ಸಂಧರ್ಭದಲ್ಲಿ ಶಶಿಧರ್ ದೀಪು ಅವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಮ್ಮ ಪಕ್ಷದಿಂದ ಯಾವುದೇ ತಕರಾರು ಇರಲಿಲ್ಲ ಆದರೆ ಕೆಲ ಪಕ್ಷದ್ರೋಹಿಗಳ ಪಿತೂರಿಯಿಂದ ಬಿಜೆಪಿಗೆ ಅಧಿಕಾರ ತಪ್ಪಿತ್ತು ಆಡಳಿತರೂಡ ಪಕ್ಷದ ಕಡೆ ವಾಲಿದ್ದ ಕೆಲವರು ಎದೆಯುಬ್ಬಿಸಿ ಓಡಾಡಿದ್ದರು ಆದರೆ ಕಾನೂನಿನ ಮುಂದೆ ಇವರ ಆಟ ನಡೆಯಲಿಲ್ಲ ಎಂದು ಕಾಲೆಳೆದರು. ಅಧ್ಯಕ್ಷರಾಗಿ ಶಶಿಧರ್ ದೀಪು ಮತ್ತು ಉಪದ್ಯಾಕ್ಷರಾಗಿ ಶ್ರೀನಿವಾಸ್ ಅವರಿಗೆ ಬೆಂಬಲ ಸೂಚಿಸಿ ವಿಪಕ್ಷದವರಾದ ನಾವೆಲ್ಲರೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೆವು ಎಂದು ತಿಳಿಸಿದರು.

