ಗುಂಡ್ಲುಪೇಟೆ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕಳೆದ 60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿರುವ ರೈತರಿಗೆ ಸಾಗುವಳಿ ವಿತರಿಸಲು ಅರಣ್ಯ ಇಲಾಖೆಯಿಂದ ಎನ್ ಓ ಸಿ , ಹಾಗೂ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಸರ್ಕಾರಕ್ಕೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಅ.13 ರಿಂದ ಅಹೋರಾತ್ರಿ ಧರಣಿಗೆ ಮುಂದಾಗಲು ರೈತಸಂಘ ಸಿದ್ದತೆ ನಡೆಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಚಾಮರಾಜನಗರ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆರೆಗಳಿಗೆ ನೀರು ತುಂಬಿಸೋ ಯೋಜನೆಯಡಿ 4 ನೇ ಹಂತದಲ್ಲಿ ಹುತ್ತೂರು ಕೆರೆಯಿಂದ ಮುಂದಿನ ಕೆರೆಗಳಿಗೆ ನೀರು ತುಂಬಿಸಬೇಕು, ಗಾಂಧೀ ಗ್ರಾಮ ಯೋಜನೆಯಡಿ ಕಸಬಾ ಹಾಗು ಬೇಗೂರು ಹೋಬಳಿ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲಾಗುವುದು.‌

ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸುವತನಕ ಧರಣಿ ಕೈಬಿಡುವ ಮಾತೇ ಇಲ್ಲ, ಈಗಾಗಲೆ ತಾಲೂಕಿನ ಕೆರೆಗಳು ಬತ್ತಿಹೋಗಿದ್ದು ಅಂತರ್ಜಲ ಕುಸಿತ ಉಂಟಾಗಿದೆ, ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತಾಪಿ ವರ್ಗ ಬಾರಿ ಸಂಕಷ್ಟಕ್ಕೆ ಸಿಲುಕಿದೆ, ಚುನಾವಣಾ ಸಂಧರ್ಭಗಳಲ್ಲಿ ಭರಪೂರ ಆಶ್ವಾಸನೆ ನೀಡುವ ನಾಯಕರು ಈಗ ಅಧಿಕಾರಿಗಳ ಸಬೂಬಿಗೆ ಮನ್ನಣೆ ನೀಡುತ್ತ ಹೋದರೆ ಬಡ ರೈತರು ಗುಳೆ ಹೋಗುವಂತಹ ಸ್ಥಿತಿ ಬಂದೊದಗುವ ಕಾಲ ದೂರವಿಲ್ಲ.

ಶಾಸಕ ಗಣೇಶ್ ಪ್ರಸಾದ್ ಅವರು 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಡಿಪಿಆರ್ ಆಗಿದೆ ಇನ್ನೇನಿದ್ದರೂ ಗುದ್ದಲಿ ಪೂಜೆ ಮಾಡುವುದೊಂದೆ ಬಾಕಿ ಎಂದು ಹೇಳಿದ್ದರು ಆದ್ರೆ ಇದುವರೆಗೂ ಸಹ ಯಾವ ಕಾಮಗಾರಿಯು ಆರಂಭವಾಗಿಲ್ಲ, ಇನ್ನಾದರೂ ತಾಲೂಕಿನ ರೈತಾಪಿ ವರ್ಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆ ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಎಷ್ಟೇ ದಿನಗಳೇ ಕಳೆದರೂ ಸಹ ನಮ್ಮ ಅಹೋರಾತ್ರಿ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.