ಗುಂಡ್ಲುಪೇಟೆ: ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿರುವುದು ಅವಿವೇಕಿತನದ ಪರಮಾವಧಿಯಾಗಿದೆ, ಸರ್ಕಾರದ ನಡೆಯಿಂದ ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂದು ರೈತ ಸಂಘ ಚಾಮರಾಜನಗರ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ವಿರೋಧ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಏಕಾಏಕಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯನ್ನ ಹೆಚ್ಚಳ ಮಾಡಿರುವುದಕ್ಕೆ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ. ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆಗೆ ಕರೆಕೊಟ್ಟಿದ್ದ ರೈತ ಸಂಘ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಎಂಡಿಸಿಸಿ ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು.

ಚಾಮರಾಜನಗರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಣೆಯಾಗಿದೆ ಇಂತಹ ಸಂಧರ್ಭದಲ್ಲಿ ಬೆಲೆಯೇರಿಕೆ ರೈತಾಪಿ ವರ್ಗಕ್ಕೆ ದೊಡ್ಡ ಹೊಡೆತ ನೀಡಿದೆ. ಇಂಧನಗಳ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದರ ಪರಿಣಾಮ ದಿನನಿತ್ಯ ಬಳಕೆಯ ವಸ್ತುಗಳ ದರವು ಬದಲಾಗುತ್ತ ಹೋಗುತ್ತದೆ, ಸರ್ಕಾರದ ನಡೆ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ಇದೇ ವೇಳೆ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಖಂಡಿಸಿ ಕುಟುಂಬದವರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು.

