ಗುಂಡ್ಲುಪೇಟೆ : ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪಧಾಧಿಕಾರಿಗಳು ಅ.13 ರಿಂದ ಆಹೋರಾತ್ರಿ ಧರಣಿಗೆ ಮುಂದಾಗುತ್ತಿರುವ ಹಿನ್ನೆಲೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕೆರೆಹಳ್ಳಿಯ ಪಂಪ್ ಹೌಸ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ, ದುರಸ್ತಿ ಕಾರ್ಯ ಚಾಲ್ತಿಯಲ್ಲಿದ್ದು 15 ದಿನಗಳಲ್ಲಿ ನೀರು ಹರಿಸಲು ಬದ್ದ , ಹಾಗಾಗಿ ರೈತರು ಸಹಕರಿಸುವಂತೆ ಮನವಿ ಮಾಡಿದ್ದಾರೆ ಆದರೆ ರೈತ ಸಂಘ ಮಾತ್ರ ಶಾಸಕರ ಮನವಿಯನ್ನ ನಿರಾಕರಿಸಿದೆ.
ರೈತ ಸಂಘ ಚಾಮರಾಜನಗರ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಅ.13 ರಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಅಹೋರಾತ್ರಿ ಧರಣಿಗೆ ತೀರ್ಮಾನ ಮಾಡಲಾಗಿದೆ, ಇದರಿಂದ ರೈತರ ಅನೇಕ ಸಮಸ್ಯೆಗಳನ್ನ ಅಧಿಕಾರಿಗಳ ಮುಂದಿರಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಹಾಗೂ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ದೃಢ ನಿಲುವು ತೆಗೆದುಕೊಳ್ಳಲಾಗಿದೆ ಅಂತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು , ಇದಾದ ಬಳಿಕ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವಾಸ್ತವ ಸ್ಥಿತಿಗತಿಯನ್ನ ಅವಲೋಕಿಸಿದ್ದಾರೆ,
ಕ್ಷೇತ್ರಕ್ಕೆ ನೀರು ಬಿಡಲು ಯಂತ್ರ ಕೈಕೊಟ್ಟಿರೋ ಸಮಸ್ಯೆ ಎಂಬ ಸಬೂಬು ಹೇಳಲಾಗ್ತಿದೆ ಅಂತ ಸಲ್ಲದ ಆರೋಪಗಳನ್ನ ಮಾಡಲಾಗ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ ಇದೆಲ್ಲಾ ಸತ್ಯಕ್ಕೆ ದೂರವಾದ ಮಾತಾಗಿದೆ, ಪಂಪ್ ಹೌಸ್ನಲ್ಲಿ ನೀರೆತ್ತುವ ಯಂತ್ರ ರಿಪೇರಿಯಾದ್ದರಿಂದ ನೀರು ಹರಿಸಲು ತಡವಾಗಿದೆ ಹೊರತು ಬೇರೇನೂ ಇಲ್ಲ, ಸ್ಥಳದಲ್ಲೇ ನುರಿತ ತಜ್ಞರನ್ನ ಕರೆಸಿ ರಿಪೇರಿ ಮಾಡಿಸಲಾಗ್ತಿದೆ ಸದ್ಯಕ್ಕೆ ದುರಸ್ತಿಗೆ ಬಂದಿರುವ ಯಂತ್ರದ ಬಿಡಿಭಾಗಗಳನ್ನ ಬಾಂಬೆ ಮತ್ತು ಪೂಣಾದಿಂದ ತರಿಸಿಕೊಳ್ಳಬೇಕಾಗಿರೋದ್ರಿಂದ ಸ್ವಲ್ಪ ಕಾಲಾವಕಾಶ ಹಿಡಿಯುತ್ತದೆ, ಶೀಘ್ರದಲ್ಲೇ ಕೆರೆಗಳಿಗೆ ನೀರು ತುಂಬಿಸಲಾಗುವುದು , ರೈತರು ಪ್ರತಿಭಟನೆ ಮಾಡುವ ಮುಂಚೆ ಸ್ಥಿತಿಗತಿಯನ್ನ ಪರಿಶೀಲನೆ ಮಾಡ್ಬೇಕು , ಜನಪ್ರತಿನಿಧಿಗಳಾಗಲಿ , ಅಧಿಕಾರಿಗಳಾಗಲಿ ಸುಳ್ಳು ಹೇಳುವ ಪ್ರಮೇಯವಿಲ್ಲ ಆದುದರಿಂದ 15 ದಿನಗಳಲ್ಲಿ ಎಲ್ಲಾ ಸರಿಹೋಗುತ್ತದೆ ರೈತರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಶಾಸಕರ ಮನವಿಯನ್ನ ನಿರಾಕರಿಸಿರುವ ರೈತ ಮುಖಂಡ ಶಿವಪುರ ಮಹದೇವಪ್ಪ ಧರಣಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ, ಹುತ್ತೂರು ಕೆರೆಗೆ ನೀರು ಹರಿದು ಬರುವತನಕ ನಮ್ಮ ಹೋರಾಟ ನಿರಂತರವಾಗಿರುತ್ತದೆ, ನಮ್ಮ ಪ್ರತಿಭಟನೆಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹ ಬೆಂಬಲ ನೀಡಲಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.

