ಚಾಮರಾಜನಗರ : ಚಾಮರಾಜನಗರ  ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಸಂಭ್ರಮ ಮನೆಮಾಡಿದೆ.

ಇಂದಿನಿಂದ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಆರಂಭವಾಗಿದ್ದು, ಜಾತ್ರೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಲಕ್ಷಾಂತರ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಅಕ್ಟೋಬರ್.‌19ರಂದು ಮಲೆಮಹದೇಶ್ವರ ಸ್ವಾಮಿಗೆ ಎಣ್ಣೆಮಜ್ಜನ ಹಾಗೂ ವಿಶೇಷ ಸೇವೆ, ಉತ್ಸವಾದಿಗಳು ನಡೆಯಲಿವೆ. ಅಕ್ಟೋಬರ್.‌20 ರಂದು ನರಕ ಚತುರ್ದಶಿ, ವಿಶೇಷ ಸೇವೆ ಹಾಗೂ ಉತ್ಸವಾದಿಗಳು, ಅಕ್ಟೋಬರ್.‌21ರಂದು ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಬೆಳಿಗ್ಗೆಯಿಂದಲೇ ಹಾಲರವಿ ಸೇವೆ ಸೇರಿದಂತೆ ವಿಶೇಷ ಸೇವೆ ಮತ್ತು ಉತ್ಸವಾದಿಗಳು ನಡೆಯಲಿವೆ.

ಅಕ್ಟೋಬರ್ 22ರಂದು ಬೆಳಿಗ್ಗೆ 9.15ರಿಂದ 9.55ರವರೆಗೆ ದೀಪಾವಳಿ ಮಹಾರಥೋತ್ಸವ ನಡೆಯಲಿದೆ. ಅಕ್ಟೋಬರ್.‌ 27ರಂದು ಕಾರ್ತಿಕ ಸೋಮವಾರ ಜಾತ್ರಾ ಮಹೋತ್ಸವ ಆರಂಭವಾಗಲಿವೆ.