ಚಾಮರಾಜನಗರ: ಹನೂರು ಶೈಕ್ಷಣಿಕ ವಲಯದ  ಕೂಡ್ಲೂರು ಕ್ಲಸ್ಟರ್ ವ್ಯಾಪ್ತಿಯ ಅಂಚಿಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಚಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಮಳೆಯ ನೀರು ಸೋರುತ್ತಿದ್ದು ಕಾಂಕ್ರೀಟ್ ಚಕ್ಕೆಗಳು ಕೆಳಗೆ ಬೀಳುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೀವ್ರ ತೊಂದರೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.

ಹನೂರು ಶೈಕ್ಷಣಿಕ ವಲಯದ ಬಹುತೇಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಗೊಂಡಿರುವುದರಿಂದ ವಿದ್ಯಾರ್ಥಿಗಳು ಮಳೆಗಾಲದ ಸಂದರ್ಭದಲ್ಲಿ ಆತಂಕದಲ್ಲಿಯೇ ಪಾಠ ಪ್ರವಚನದಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಾಗ ಪೋಷಕರು ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ  ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಕಳೆದ ತಿಂಗಳು ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಪೆದ್ದನ ಪಾಳ್ಯ ಗ್ರಾಮದ  62 ವಿದ್ಯಾರ್ಥಿಗಳನ್ನು 9 ದಿನಗಳ ಕಾಲ ಶಾಲೆಗೆ ಕಳುಹಿಸದೆ ಪ್ರತಿಭಟನೆ ನಡೆಸಿರುವುದೇ ಇದಕ್ಕೆ ಉದಾಹರಣೆಯಾಗಿದೆ.

ಹನೂರು ಶೈಕ್ಷಣಿಕ ವಲಯದ ಅಂಚಿಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ 41 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಯಲ್ಲಿ ಆಟದ ಮೈದಾನ, ಶೌಚಾಲಯ, ಶುದ್ಧ ಕುಡಿಯುವ ನೀರು, ಶಾಲಾ ಕಾಂಪೌಂಡ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳು ಇಲ್ಲದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ.

ಆಟದ ಮೈದಾನವೇ ಇಲ್ಲ: ಸಾಕ್ಷರತಾ ಇಲಾಖೆಯಿಂದ ನಡೆಸುವ ಹೋಬಳಿ, ತಾಲೂಕು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರತಿ ವರ್ಷವೂ  ಶಿಕ್ಷಣದ ಜೊತೆಗೆ , ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢ ರಾಗಬೇಕು, ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು  ಭಾಷಣ ಮಾಡುತ್ತಾರೆ.

ಆದರೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಟದ ಮೈದಾನ ಇದೆಯೋ ಇಲ್ಲವೋ ಎಂಬುವುದರ ಬಗ್ಗೆ ಅರಿವೆ ಇರುವುದಿಲ್ಲ, ವಿದ್ಯಾರ್ಥಿಗಳಿಗೆ ಆಟದ ಮೈದಾನ ಇಲ್ಲದಿದ್ದ ಮೇಲೆ ವಿದ್ಯಾರ್ಥಿಗಳು ಎಲ್ಲಿ ಅಭ್ಯಾಸ ಮಾಡುವುದು, ಅಭ್ಯಾಸ ಇಲ್ಲದಿದ್ದರೆ ಮೇಲೆ ಕ್ರೀಡೆಯಲ್ಲಿ ಭಾಗವಹಿಸಿ ಯಾವ ರೀತಿ ತಮ್ಮ ಪ್ರತಿಭೆ ತೋರಿಸುವುದು ಎಂಬುದನ್ನು ಅಧಿಕಾರಿಗಳು ತಿಳಿಸಬೇಕಿದೆ.

ಇನ್ನು ಹಂಚಿಪಾಳ್ಯ ಗ್ರಾಮದ ಶಾಲೆಯಲ್ಲಿ ಆಟದ ಮೈದಾನ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಆಟವಾಡುತ್ತಿದ್ದಾರೆ. ವಾಹನಗಳು ಅತಿ ವೇಗವಾಗಿ ಬಂದು ಯಾವುದಾದರೂ ಅನಾಹುತಗಳು ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನೆ ಮಾಡಿದ್ದಾರೆ.