ಗುಂಡ್ಲುಪೇಟೆ : ಹಾಡಹಗಲೇ ಹುಲಿ ದಾಳಿಗೆ ಹಸು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಾದಪಟ್ಟಣ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಗುಂಡ್ಲುಪೇಟೆ ಬಪರ್ ವಲಯಕ್ಕೆ ಸೇರಿದ ಮಾದಪಟ್ಟಣ ಗ್ರಾಮದ ಗುರುಮಲ್ಲಪ್ಪ ಎಂಬವರಿಗೆ ಸೇರಿದ ಹಸು ಸಾವನ್ನಪ್ಪಿದ್ದು ಹಗಲಿನಲ್ಲೇ ವ್ಯಾಘ್ರ ದಾಳಿ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ ಹಠಾತ್ ದಾಳಿ ನಡೆಸಿದ ಹುಲಿಯನ್ನ ಕಂಡ ರೈತರು ಜೋರಾಗಿ ಕೂಗಿಕೊಂಡ ವೇಳೆ ಗಲಿಬಿಲಿಗೊಂಡ ವ್ಯಾಘ್ರ ಸನಿಹದಲ್ಲೇ ಇದ್ದ ಪೊದೆಯೊಳಗೆ ಅಡಗಿ ಕುಳಿತಿದೆ ಎಂಬ ಮಾಹಿತಿ ಲಭ್ಯವಾಗಿದೆ, ಘಟನಾ ಮಾಹಿತಿಯನ್ನರಿತ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಹುಲಿ ಪತ್ತೆಗೆ ಮುಂದಾಗಿದ್ದಾರೆ.
ಹುಲಿ ಸೆರೆಗೆ ಹೆಚ್ಚಿದ ಒತ್ತಡ : ವನ್ಯಜೀವಿಗಳ ಉಪಟಳಕ್ಕೆ ಅಂಕುಶ ಬಿದ್ದಿದೆ ಎಂದು ನಿರಾಳರಾಗಿದ್ದ ರೈತರು ಇದೀಗ ಹಾಡಹಗಲೇ ಜಮೀನಿನಲ್ಲಿ ಕಾಣಿಸಿಕೊಂಡು ಜಾನುವಾರು ಬಲಿ ಪಡೆದಿರುವ ಬಾರಿ ಗಾತ್ರದ ವ್ಯಾಘ್ರನ ಕಂಡು ಬೆಚ್ಚಿಬಿದ್ದಿದ್ದಾರೆ, ಈ ಕೊಡಲೇ ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಬೇಕು ಹಾಗೂ ಹಸು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

