ಗುಂಡ್ಲುಪೇಟೆ: 1998 ರ ಕೊಯಂಬತ್ತೂರು ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಾಧಿಕ್ ಮೂಲತಃ ಗುಂಡ್ಲುಪೇಟೆಯವನು ಎಂಬ ಸತ್ಯಾಂಶ ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ವಿಜಯಪುರದಲ್ಲಿ ತಮಿಳುನಾಡು ಅಪರಾಧ ವಿಭಾಗದ ಪೊಲೀಸರ ಖೆಡ್ಡಾಗೆ ಬಿದ್ದಿರುವ ಸಾಧಿಕ್ಅಲಿ ಅಲಿಯಾಸ್ ಸಿದ್ದಿಕ್ಕಿರಾಜ್ ಮೂಲತಃ ಗುಂಡ್ಲುಪೇಟೆಯ ಅಣ್ಣೂರುಕೇರಿ ಗ್ರಾಮದವನು ಎಂದು ತಿಳಿದು ಬಂದಿದೆ. 1990 ರಲ್ಲೇ ಇಡೀ ಕುಟುಂಬ ಕೊಯಂಬತ್ತೂರಿಗೆ ವಲಸೆ ಹೋಗಿ ನೆಲೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಸಾಧಿಕ್ಅಲಿ ತಾಯಿ ತಾಜಾ ಉನ್ನೀಸ್ ಗುಂಡ್ಲುಪೇಟೆಯ ಅಣ್ಣೂರುಕೇರಿ ಗ್ರಾಮದವರಾಗಿದ್ದು ಕೇರಳ ಸುಲ್ತಾನ್ ಬತ್ತೇರಿಯ ಅಬ್ದುಲ್ ಮಜೀದ್ ಎಂಬಾತನ ಜೊತೆ ವಿವಾಹವಾಗಿದ್ದರು, ವಿವಾಹದ ಬಳಿಕ ಅಬ್ದುಲ್ ಮಜೀದ್ ಸಹ ಅಣ್ಣೂರುಕೇರಿಯಲ್ಲೇ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ , ದಂಪತಿಗಳಿಗೆ ಮೂವರು ಮಕ್ಕಳಿದ್ದು ಬಂಧಿತ ಸಾಧಿಕ್ ಕೊನೆಯ ಮಗ ಎಂಬ ಮಾಹಿತಿ ಬಹಿರಂಗವಾಗಿದೆ.

ಆರೋಪಿ ಸಾಧಿಕ್ ಕಿರಿಯ ಪ್ರಾಥಮಿಕ ಶಾಲೆಯನ್ನ ಅಣ್ಣೂರುಕೇರಿಯಲ್ಲಿ ಪೂರ್ಣಗೊಳಿಸಿ ಪ್ರಾಥಮಿಕ ಶಿಕ್ಷಣಕ್ಕೆ ಪಟ್ಟಣದ ಗಣಪತಿ ಶಾಲೆ ಹಾಗೂ ಪ್ರೌಢಶಾಲೆ ಶಿಕ್ಷಣವನ್ನ ದೊಡ್ಡಹುಂಡಿ ಭೋಗಪ್ಪ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾನೆ ಎಂದು ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ತಂದೆ ಅಬ್ದುಲ್ ಮಜೀದ್ ವ್ಯಾಪಾರ ನಡೆಸುವ ಜೊತೆಯಲ್ಲೇ ಜಮೀನು ಭೋಗ್ಯಕ್ಕೆ ಪಡೆದು ವ್ಯವಸಾಯ ಮಾಡಲಾರಂಭಿಸುತ್ತಾರೆ ಆದರೆ ಕೃಷಿಯಲ್ಲಿ ಅಪಾರ ನಷ್ಟವಾದ ಹಿನ್ನೆಲೆ 1990 ರಲ್ಲಿ ಗ್ರಾಮವನ್ನ ತೊರೆದು ತಮಿಳುನಾಡಿನ ಕೊಯಂಬತ್ತೂರಿಗೆ ತೆರಳಿ ಅಲ್ಲಿಯೇ ನೆಲೆಸಿದ್ದರಂತೆ. ಇದಾದ ಬಳಿಕ 1998 ರಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಾಧಿಕ್ ಪ್ರಮುಖ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.

ಕೊಯಂಬತ್ತೂರಿನಲ್ಲಿ ಬಾಂಬ್ ಬ್ಲಾಸ್ಟ್ ಕೃತ್ಯ ಎಸಗಿದ ಬಳಿಕ ಆರೋಪಿ ಸಾಧಿಕ್ ಮೂರು ದಿವಸಗಳ ಕಾಲ ಅಣ್ಣೂರುಕೇರಿಯ ತನ್ನ ಸೋದರ ಮಾವ ಮಹಮದ್ ಅಲಿ ಜಿನ್ನಾ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ. ಕೃತ್ಯ ಸಂಬಂದ ತಮಿಳುನಾಡು ಪೊಲೀಸರು ಹುಡುಕಾಟ ನಡೆಸುವ ಮಾಹಿತಿಯನ್ನರಿತ ಈತ ತಲೆಮರೆಸಿಕೊಂಡು ಬೇರೆ ಬೇರೆ ಹೆಸರುಗಳಿಂದ ಗುರ್ತಿಸಿಕೊಳ್ಳುತ್ತಿದ್ದ, ಟೇಲರ್ ರಾಜಾ, ವಲರಂತ ರಾಜ, ಶಹಾಜಹಾನ್, ಎಂಬಂತೆ ಹೆಸರು ಬದಲಾಯಿಸಿಕೊಂಡು ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.

ತಮಿಳುನಾಡು ಗುಪ್ತಚರ ಮಾಹಿತಿ ಮೇರೆಗೆ ಕಾರ್ಯನಿರ್ವಹಿಸಿದ ಭಯೋತ್ಪಾದನಾ ನಿಗ್ರಹ ಪಡೆ ಕೊಯಂಬತ್ತೂರು ವಿಶೇಷ ಪೊಲೀಸ್ ಪಡೆ ರಾಜ್ಯದ ವಿಜಯಪುರದಲ್ಲಿ ಟೇಲರ್ ರಾಜಾ ಎಂಬ ಹೆಸರಿನಲ್ಲಿ ವಾಸವಾಗಿದ್ದ ಎಂದು ಎಟಿಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಆರೋಪಿ ಸಾಧಿಕ್ ಅನೇಕ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ, 1996 ರ ಪೆಟ್ರೋಲ್ ಬಾಂಬ್ ಸ್ಪೋಟ, ನಗೋರ್ ನಲ್ಲಿ ನಡೆದ ಸಯಿತಾ ಹತ್ಯಾ ಪ್ರಕರಣ, 1997 ರಲ್ಲಿ ನಡೆದ ಜೈಲರ್ ಜಯಪ್ರಕಾಶ್ ಹತ್ಯೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.