ಗುಂಡ್ಲುಪೇಟೆ: ಜಿಲ್ಲಾ ವ್ಯಾಪ್ತಿ ಸೇರಿದಂತೆ ರಾಜ್ಯ ಬಹುತೇಕ ರಸ್ತೆಗಳು ಗುಂಡಿ ಬಿದ್ದು ಹದಗೆಟ್ಟು ಹೋಗಿರುವುದರಿಂದ ಜನಸಾಮಾನ್ಯರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಿ ಮುಚ್ಚಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಕಾರ್ಯಕರ್ತರು ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ನೇತೃತ್ವದಲ್ಲಿ ಗುಂಡಿ ಮುಚ್ಚುವ ಮೂಲಕ  ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೋಡಹಳ್ಳಿ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ವೃತ್ತದಲ್ಲಿನ ಗುಂಡಿಗಳನ್ನ ಮುಚ್ಚುವ ಮೂಲಕ ಸರ್ಕಾರದ  ಶಾಸಕ ಸಚಿವರ ವಿರುದ್ದ ದಿಕ್ಕಾರದ ಘೋಷಣೆಗಳನ್ನ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ ರಾಜ್ಯದ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ, ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ, ಅದ್ವಾನಗೊಂಡಿರುವ ರಸ್ತೆಗಳಿಂದ ಅಪಘಾತಗಳು ಸಂಭವಿಸಿ ಅದೆಷ್ಟೋ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ರೆ ಕೆಲಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.

ಗುಂಡ್ಲುಪೇಟೆಯಲ್ಲಿ ಬಹುತೇಕ ರಸ್ತೆಗಳು ಗುಂಡಿಬಿದ್ದು ಹಾಳಾಗಿವೆ, ಸ್ಥಳೀಯ ಶಾಸಕರು ತಮ್ಮ ಸ್ವಗ್ರಾಮಕ್ಕೆ ಉತ್ತಮ ರಸ್ತೆ ವ್ಯವಸ್ಥೆ ಮಾಡಿಕೊಳ್ಳಲು ಉತ್ಸುಕರಾಗಿದ್ದಷ್ಟು ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಕಡೆಗೆ ಗಮನಕೊಡಲಿಲ್ಲ , ತಮ್ಮ ಸ್ವಾಯತ್ತತೆಯಲ್ಲಿರುವ ಕ್ರಷರ್ ಗೆ ರಸ್ತೆ ಮಾಡಿಸಲೊರಟಿದ್ದ ಶಾಸಕರು ರೈತರನ್ನ ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ರು ಆದ್ರೆ ನಮ್ಮ ಪಕ್ಷದ ಹಿರಿಯ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವ್ರು ಮಧ್ಯಪ್ರವೇಶಿಸಿ ರಸ್ತೆ ಕಾಮಗಾರಿಗೆ ಅಂಕುಶ ಹಾಕಿದ್ದನ್ನ ಇಡೀ ಕ್ಷೇತ್ರದ ಜನತೆ ನೋಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.