ಚಾಮರಾಜನಗರ: ಹೊಸವರ್ಷಾಚರಣೆ ಹಿನ್ನಲೆಯಲ್ಲಿ ಡಿಸೆಂಬರ್ 31 ಹಾಗೂ 2025 ರ ಜನವರಿ 1 ರಂದು ಎರಡು ದಿನಗಳ ಕಾಲ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರ ವಾಸ್ತವ್ಯವನ್ನು ನಿಷೇಧಿಸಲಾಗಿದ್ದು, ಈ ವೇಳೆ ವಸತಿ ಗೃಹಗಳು ಬಂದ್ ಆಗಲಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ವರ್ಷಾಂತ್ಯದ ಡಿಸೆಂಬರ್ 31ರಂದು ಹೊಸ ವರ್ಷ ಆಚರಣೆಗೆಂದು ಚಾಮರಾಜನಗರ ಜಿಲ್ಲೆಯ ಬಂಡೀಪುರಕ್ಕೆ ಬರುವ ಪ್ರವಾಸಿಗರಿಗೆ ವನ್ಯಪ್ರಾಣಿಗಳ ಹಿತದೃಷ್ಟಿಯಿಂದ ಬಂಡೀಪುರದ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಲು ಅವಕಾಶ ನೀಡದೆ ನಿರ್ಬಂಧ ಹೇರಲಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವಸತಿ ಗೃಹಗಳಲ್ಲಿ ಎರಡು ದಿನಗಳ ಕಾಲ ಪ್ರವಾಸಿಗರಿಗೆ ನೀಡದಿರಲು ನಿರ್ಧರಿಸಿರುವ ಅರಣ್ಯ ಇಲಾಖೆ ನಿರ್ಧರಿಸಿದ್ದು ಅದರಂತೆ ಬಂಡೀಪುರ ವ್ಯಾಪ್ತಿಯಲ್ಲಿರುವ ಖಾಸಗಿ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲೂ ಡಿ.31 ಮತ್ತು ಜನವರಿ 1 ರಂದು ಕಾಡು ಪ್ರಾಣಿಗಳಿಗೆ ಧಕ್ಕೆಯಾಗದಂತೆ ಲೈಟಿಂಗ್ಸ್ ಹಾಗೂ ಧ್ವನಿ ವರ್ಧಕ ಡಿಜೆ ಯ ಶಬ್ದವನ್ನು ಮಿತಿಯೊಳಗೆ ಬಳಸಬೇಕು, ಒಂದು ವೇಳೆ ಇದನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ನೊಟೀಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಸಂಬಂಧ ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್ ಕೆ.ನವೀನ ಕುಮಾರ್ ಅವರು ಮಾಹಿತಿ ನೀಡಿದ್ದು, ಪ್ರತಿ ವರ್ಷದಂತೆ ಬಂಡೀಪುರದಲ್ಲಿ ಎರಡು ದಿನಗಳ ಕಾಲ ಯಾವುದೇ ರೀತಿಯ ವಸತಿಗೃಹಗಳ ಬಳಕೆ ನಿಷೇಧ ಮಾಡಲಾಗಿದೆ. ಖಾಸಗಿ ರೆಸಾರ್ಟ್ ಗಳಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.