ಚಾಮರಾಜನಗರ : ಜಿಲ್ಲಾ ದಸರಾ ಈ ಬಾರಿ ಮಾಡುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಜಾನಪದ ಕಲಾವಿದರು ಚಾಮರಾಜನಗರ ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರತಿಭಟಿಸಿದರು.

ಚಾಮರಾಜನಗರದ ಚಾಮರಾಜೇಶ್ವರ ದೇಗುಲ‌ ಮುಂಭಾಗದಿಂದ ತಂಬೂರಿ, ವೀರಗಾಸೆ ಕಲಾವಿದರು, ಸೋಬಾನೆ ಕಲಾವಿದರು, ಓಲಗ, ಗೊರವರ ಕುಣಿತ ಸೇರಿದಂತೆ ಜಾನಪದ ಕಲಾವಿದರು ವೇಷ-ಭೂಷಣ ತೊಟ್ಟು ಈ ಬಾರಿ ಜಿಲ್ಲಾ ದಸರಾ ಮಾಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ತನಕ ಮೆರವಣಿಗೆ ನಡೆಸಿದರು.

ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾ ದಸರಾ ಆಚರಣೆ ಸಮಿತಿಯ ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ಹೊರ ಹಾಕಿದರು. 1997ರಲ್ಲಿ ಪ್ರತ್ಯೇಕ ಜಿಲ್ಲೆಯಾಗಿ ರೂಪಗೊಂಡ ಬಳಿಕ ಚಾಮರಾಜನಗರ ಜಿಲ್ಲೆಯಲ್ಲಿ 2007ರಿಂದ ಗ್ರಾಮೀಣ ದಸರಾ ಎಂಬ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿತ್ತು.

2013 ರಿಂದ ಚಾಮರಾಜನಗರ ದಸರಾ ಎಂಬ ಹೆಸರಿನಿಂದಲೇ ದಸರಾ ಉತ್ಸವಗಳು ಆಯೋಜನೆಗೊಂಡಿತು. ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಚಾಮರಾಜನಗರ ಉಸ್ತುವಾರಿ ಸಚಿವರಾಗಿದ್ದ ದಿ.ಎಚ್ಎಸ್ ಮಾದೇವ ಪ್ರಸಾದ್ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರ ಕಾಳಜಿಯಿಂದ ಚಾಮರಾಜನಗರದಲ್ಲಿ ದಸರಾ ಆರಂಭವಾಯಿತು.

ಅಂದಿನಿಂದ ಇಲ್ಲಿಯವರೆಗೂ ಸತತವಾಗಿ ನಡೆದುಕೊಂಡು ಬರುತ್ತಿದ್ದ ದಸರಾವನ್ನು ಪ್ರಸ್ತುತ ವರ್ಷದಲ್ಲಿ ಚಾಮರಾಜನಗರದಲ್ಲಿ ದಸರಾ ಆಚರಣೆ ಬೇಡ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ಜಿಲ್ಲೆಯ ಜನರಿಗೆ ಹಾಗೂ ಕಲಾವಿದರಿಗೆ ನೋವು ಮತ್ತು ಅವಕಾಶ ವಂಚಿತರಾಗುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ‌ ಹೊರ ಹಾಕಿದರು.

ಚಾಮರಾಜನಗರದ ಭೂ ಪ್ರದೇಶವು ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತು ಎಂಬುದಕ್ಕೆ ಉತ್ತಮ ನಿದರ್ಶನಗಳು ಇತಿಹಾಸದ ದಾಖಲೆಗಳಲ್ಲಿವೆ. ಆ ಕಾರಣಕ್ಕಾಗಿ ಈವರವಿಗೂ ಇಲ್ಲಿ ದಸರಾ ಕಾರ್ಯಕ್ರಮಗಳು ನಡೆದುಕೊಂಡು ಬಂದಿದೆ. ಜಿಲ್ಲೆಯ ಜನರು ಭಾವನಾತ್ಮಕವಾಗಿ ಮೈಸೂರಿನೊಂದಿಗೆ ಸಂಬಂಧ ಬೆಸೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ಕಲಾವಿದರಿದ್ದು, ಮೈಸೂರಿನ ದಸರಾ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಅವಕಾಶಗಳು ಲಭ್ಯವಾಗುವುದಿಲ್ಲ.

ಇಲ್ಲಿನ ನಾಗರಿಕರು ಮೈಸೂರಿಗೆ ಹೋಗಿ ದಸರಾ ವೈಭವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಕಷ್ಟವಾಗುತ್ತದೆ. ಎಂದಿನಂತೆ ನಡೆಯುತ್ತಿದ್ದ ಚಾಮರಾಜನಗರ ದರಸಾವನ್ನು ಈ ಬಾರಿಯು ಸಹ ಯಾವುದೇ ಅಡೆತಡೆಗಳಿಲ್ಲದೆ ಆಚರಣೆ ಮಾಡಬೇಕು ಮತ್ತು ಇಲ್ಲಿನ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ: ಇನ್ನು, ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಆಗಮಿಸಿ ಕಲಾವಿದರ ಅಹವಾಲು ಆಲಿಸಿದರು. ಜಿಲ್ಲಾ ದಸರಾಗೆ ಕೊಡುತ್ತಿದುದು 2 ಕೋಟಿ ಅನುದಾನವಷ್ಟೆ ಆದ್ದರಿಂದ ಜಿಲ್ಲೆಯ ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಬಗ್ಗೆ ಒತ್ತಾಯಿಸಲಾಗುವುದು ಎಂದರು.