ಚಾಮರಾಜನಗರ : ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಬಾಲಕನೊಬ್ಬ ನೋವಿನಿಂದ ನರಳಾಡುತ್ತಿದ್ದ ದೃಶ್ಯ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಂಡುಬಂದಿತು.
ಮರದಿಂದ ಆಯತಪ್ಪಿ ಬಿದ್ದು ಪೆಟ್ಟಾಗಿದ್ದ ಬಾಲಕನನ್ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡ ಬಂದಾಗ ಚಿಕಿತ್ಸೆಯು ಸಿಗಲಿಲ್ಲ, ಆಂಬುಲೆನ್ಸ್ ಸೇವೆಯು ಸಿಕ್ಕಿಲ್ಲವಾದ್ದರಿಂದ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕೋಟಿ ಕೋಟಿ ಹಣಗಳಿಕೆ ಮಾಡುವ ಮಾದಪ್ಪನ ಸನ್ನಿಧಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ಆರೋಗ್ಯ ಸೇವೆಯು ಸಿಗದೆ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತುರ್ತು ಸಂದರ್ಭದಲ್ಲಿ 108 ಗೆ ಕರೆ ಮಾಡಿದರೆ ಹನೂರಿನಿಂದ ಘಟನಾ ಸ್ಥಳಕ್ಕೆ ಬರಲು 2 ಗಂಟೆ ಸಮಯವಾಗುತ್ತೆ ಅಲ್ಲಿಯವರೆಗೂ ರೋಗಿಗಳು ಬಳಲುತ್ತಿರಲೇಬೇಕು. ಆಂಬುಲೆನ್ಸ್ ಸೇವೆ ಬೆಟ್ಟದಲ್ಲಿ ಸಿಗುತ್ತಿಲ್ಲ, ಇರುವ ವಾಹನವನ್ನ ದುರಸ್ತಿ ಮಾಡದೆ ಮೂಲೆ ಸೇರಿಸಲಾಗಿದೆ, ಪ್ರಾಣ ಹಾನಿ ಸಂದರ್ಭದಲ್ಲಿ ನೆರವಿಗೆ ಬರುವುದು ಕನಸಿನ ಮಾತು ಎಂದು ಸಮಾಜ ಸೇವಕ ಸ್ನೇಹಜೀವಿ ರಾಜ್ ಬೇಸರ ವ್ಯಕ್ತಪಡಿಸಿ ಅಧಿಕಾರಿಗಳು ಹಾಗೂ ಬೆಟ್ಟದ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದಿದ್ದಾರೆ.

