ಗುಂಡ್ಲುಪೇಟೆ : ಒಬ್ಬಾಕೆ ಮೂಖಿ, ಇನ್ನೊಬ್ಬರಿಗೆ ಕಣ್ಣಿನ ದೃಷ್ಟಿ ಸಮಸ್ಯೆ, ಮನೆಯಲ್ಲಿ ಕಡುಬಡತನ, ಒಂದೊಂದು ತುತ್ತಿಗೂ ಪರದಾಡುವಂತ ಪರಿಸ್ಥಿತಿ ಇಂತಹ ಸಂದಿಗ್ನ ಸ್ಥಿತಿಯಲ್ಲಿ ಅನಾಥ ಸಹೋದರಿಯರ ನೆರವಿಗೆ ನಿಂತಿದ್ದು ಮಾತ್ರ ಗುಂಡ್ಲುಪೇಟೆ ರಕ್ತಧಾರೆ ಬಳಗ.
ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಶ್ರೀಕಂಠಪುರ ಗ್ರಾಮದಲ್ಲಿ ವಾಸವಾಗಿರುವ ಸಿದ್ದಮ್ಮ ಹಾಗೂ ಮಾಲಮ್ಮ ಎಂಬ ಸಹೋದರಿಯರಿಗೆ ಗ್ರಾಮಪಂಚಾಯತಿಯಿಂದ ಯಾವುದೇ ರೀತಿಯಾದ ಸೌಲಭ್ಯಗಳು ಸಿಕ್ಕಿಲ್ಲ, ಮುರುಕಲು ಮನೆಯಲ್ಲಿ ಇಂದಿಗೂ ವಾಸಿಸುತ್ತಿರುವ ಇವರ ಸಂಕಷ್ಟ ಕಂಡ ಗುಂಡ್ಲುಪೇಟೆ ರಕ್ತಧಾರೆ ಬಳಗದ ಯುವಕರು ಸಹಾಯ ಹಸ್ತ ಚಾಚುವ ಮೂಲಕ ಬಡ ಸಹೋದರಿಯರ ಬಾಳಲ್ಲಿ ಹರುಷ ತಂದಿದ್ದಾರೆ.
ಗೌರಿ ಗಣೇಶ ಹಬ್ಬಕ್ಕೂ ಮುಂಚಿತವಾಗಿ ಇವರಿಗೆ ಬೇಕಾದ ದಿನಸಿ ಪದಾರ್ಥಳನ್ನ ನೀಡುವ ಜೊತೆಗೆ ವಾಸಿಸಲು ಯೋಗ್ಯವಾಗುವಂತೆ ಮನೆಯನ್ನ ದುರಸ್ತಿಗೊಳಿಸುವ ಭರವಸೆ ನೀಡಿದೆ. ಇನ್ನೇನೂ ಬೀಳುವ ಹಂತದಲ್ಲಿರುವ ಮನೆಯಲ್ಲಿಯೇ ವಾಸ ಮಾಡ್ತಿರುವ ಇವರಿಗೆ ಸ್ನಾನ ಗೃಹ ಇಲ್ಲದೆ ಸಮಸ್ಯೆ ಎದುರಾಗಿತ್ತು, ಬಡ ಸಹೋದರಿಯರ ಸಮಸ್ಯೆಗೆ ಸ್ಪಂದಿಸಿರುವ ರಕ್ತಧಾರೆ ಬಳಗ ಸ್ನೇಹಿತರು ಕೈಲಾದಷ್ಟು ಸಹಾಯ ಮಾಡುವ ಪಣ ತೊಟ್ಟಿದ್ದಾರೆ.
ಇಷ್ಟೆಲ್ಲಾ ಆದ್ಮೇಲೆ ಗ್ರಾಮಪಂಚಾಯತಿ ಇರುವುದಾದ್ರು ಯಾಕೆ ಎಂಬ ಪ್ರಶ್ನೆ ಸಹಜವಾಗಿ ಕಾಡತೊಡಗುತ್ತದೆ, ಬಡವರ ಪರವಾಗಿ ಸಿಹಿಸಿಹಿ ಮಾತುಗಳನ್ನಾಡುವ ಜನಪ್ರತಿನಿಧಿಗಳು ಇಂತಹ ಸನ್ನಿವೇಶಗಳನ್ನ ಕಾಣದಿರುವುದು ವಿಪರ್ಯಾಸದ ಸಂಗತಿಯಾಗಿದೆ, ಒಟ್ಟಾರೆಯಾಗಿ ಕಡುಬಡತನದಲ್ಲಿದ್ದ ಸಹೋದರಿಯರಿಗೆ ಸೂರಿನ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಿರುವ ರಕ್ತಧಾರೆ ಬಳಗದ ಮಣಿ ಹಾಗೂ ಸ್ನೇಹಿತರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

