ಚಾಮರಾಜನಗರ: ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಉಪ ವಿಭಾಗದಲ್ಲಿ ಇಂದು ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರಿಂದ ಅನೇಕ ದೂರುಗಳು ಕೇಳಿ ಬಂದವು.

ಬೇಡರಪುರ ಗ್ರಾಮದ ನಾಗೇಂದ್ರ ಎಂಬವವರು ಮಾತನಾಡಿ ತಮ್ಮ ಭಾಗದಲ್ಲಿ 7,8 ವಿದ್ಯುತ್ ಕಂಬಗಳು ಡ್ಯಾಮೇಜ್ ಆಗಿವೆ, ವೈರ್ ಕಟ್ಟಾಗುತ್ತಿದೆ, ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ತಿಳಿಸಿದರು ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು, ಬದನಗುಪ್ಪೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಿದ್ದು, ವಿದ್ಯುತ್ ಸಮಸ್ಯೆಗಳು ಉಂಟಾಗುತ್ತಿದೆ ಹೀಗಾಗಿ ಹೆಚ್ಚಿನ ಲೈನ್ ನಲ್ಲಿ ಮೆನ್ ಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಿದರು.

ರೈತ ಮುಖಂಡ ಮೂಡ್ಲುಪುರ ನಾಗರಾಜ ಅವರು ಮಾತನಾಡಿ ಕರೆಂಟ್ ಹೋದರೆ ಸ್ಪಂದಿಸುತ್ತಿಲ್ಲ, ಲೈನ್ ಮ್ಯಾನ್ ಗಳು ಕೇಂದ್ರ ಸ್ಥಾನದಲ್ಲಿ ಉಳಿಯುತ್ತಿಲ್ಲ ಸರ್ವಿಸ್ ಸ್ಟೇಷನ್ ಗೆ ಫೋನ್ ಮಾಡಿದರೆ ಸ್ವೀಕರಿಸುತ್ತಿಲ್ಲ, ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿ ಜಂಗಲ್ ಕಟಿಂಗ್ ಆಗಿಲ್ಲ, ಮೂಡ್ಲುಪುರಕ್ಕೆ ಹೆಚ್ಚುವರಿ ಟಿಸಿ ಅಳವಡಿಸಬೇಕು ಎಂದು ತಿಳಿಸಿದರು.

ರಾಮಸಮುದ್ರ ನಾಗರಾಜು ಅವರು ಮಾತನಾಡಿ, ರಾಮಸಮುದ್ರದಲ್ಲಿ ಅಳವಡಿಸಿರುವ ಟ್ರಾನ್ಸ್ ಫಾರ್ಮರ್ ಗೆ ಸರ್ವಿಸ್ ಮಾಡಿಲ್ಲ, ಇದರಿಂದ ಪ್ರಾಣಿಗಳು ಮೃತಪಟ್ಟರೆ ಯಾರು ಜವಾಬ್ದಾರಿ, ಟಾಟಾ ಶೋರೂಮ್ ಬಳಿ ಟಿಸಿ ಅಳವಡಿಸಲು ಹಣ ಪಡೆದಿದ್ದಾರೆ, ಈ ಬಗ್ಗೆ ಎಸ್‌ಸಿ/ಎಸ್‌ಟಿ ಸಭೆಯಲ್ಲೂ ಚರ್ಚೆಯಾಗಿದೆ, ಹೀಗಾಗಿ ಈ ಭಾಗದ ಜೂನಿಯರ್ ಇಂಜಿನಿಯರ್(JE) ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಭಾರತ್ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಅವರು ಮಾತನಾಡಿ ಹಂಡ್ರಕಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ವಿದ್ಯುತ್ ಕಂಬವಿದ್ದು, ಅದು ತುಂಬಾ ವಾಲಿದೆ, ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಕೂಡಲೆ ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿ ಮಾತನಾಡಿದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಅವರು ಮಾತನಾಡಿ, ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಕ್ರಮ ವಹಿಸಲಾಗುವುದು, ಮುಂದಿನ ಸಭೆಗೆ ಹೆಚ್ಚು ಪ್ರಚಾರ ನೀಡಿ ಗ್ರಾಹಕರ ಕುಂದು ಕೊರತೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ, ಸಹಾಯಕ ಎಂಜಿನಿಯರ್ ಗ ಳಾದ ಪ್ರವೀಣ್ ಸಿ,ಎಸ್, ನಾಗೇಂದ್ರ, ಸಹಾಯಕ ಲೆಕ್ಕಾಧಿಕಾರಿ ಮಂಗಳಗೌರಿ, ಮಹಾದೇವಸ್ವಾಮಿ, ಚಂದ್ರನಾಯಕ ಸೇರಿದಂತೆ ಇತರರು ಇದ್ದರು.