ಹಳ್ಳಿಗಳ ಹಿಂದಿನ ಸಂಪ್ರದಾಯವನ್ನು ಮತ್ತೆ ಮೆಲುಕು ಹಾಕುತ್ತಿದೆ ನಾಗರಪಂಚಮಿ

ಶ್ರಾವಣ ಮಾಸ ಬಂತು ಅಂದರೆ ಹಬ್ಬಗಳ ಸಂಭ್ರಮ ಪ್ರಾರಂಭವಾಗುತ್ತದೆ, ಒಂದರ ನಂತರ ಒಂದು ಹಬ್ಬಗಳು ಬರಲಾರಂಭಿಸುತ್ತದೆ. ಹಾಗಾಗಿಯೇ ಶ್ರಾವಣವನ್ನು ಹಬ್ಬಗಳ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಮೊದಲಿಗೆ ನಾಗರ ಪಂಚಮಿ ಹಬ್ಬದಿಂದ ಶುರುವಾಗುವ ಶ್ರಾವಣ, ನಂತರ ಸಾಲು ಸಾಲು ಹಬ್ಬಗಳು ಬರಲಾರಂಭಿಸುತ್ತವೆ.

ನಾಗರ ಪಂಚಮಿ ಹಬ್ಬವನ್ನು ವಿಶೇಷವಾಗಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಮಳೆ ನೀರು ಹಾವುಗಳ ಬಿಲಗಳಿಗೆ ಸೇರಿಕೊಳ್ಳುವುದರಿಂದ ಹಾವುಗಳು ಈ ಸಮಯದಲ್ಲಿ ಹೊರಗೆ ಬರುತ್ತವೆ. ಇದು ಅವುಗಳ ಸಂತಾನಾಭಿವೃದ್ಧಿಗೆ ಸಕಾಲವು ಹೌದು. ಇದೇ ಸಂದರ್ಭದಲ್ಲಿ ನಾಗರ ಪಂಚಮಿ ಹಬ್ಬ ಆಚರಣೆ ಮಾಡುವುದು ಪೂರ್ವಿಕರ ನಂಬಿಕೆಯಾಗಿದೆ.
ನಾಗರ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಅಂದರೆ ಜೂನ್ ಅಂತ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಹಾಗೆಯೇ ಈ ವರ್ಷ ಇದನ್ನು ಆಗಸ್ಟ್ 2 ರಂದು ಆಚರಿಸಲಾಗುತ್ತಿದೆ. ಈ ದಿನದಂದು ನಾಗದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳ ಬಳಿ ತೆರಳಿ, ಎಲ್ಲಾ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಳ್ಳುವ ಜನರು, ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಅಷ್ಟೇ ಅಲ್ಲದೇ ಈ ಹಬ್ಬವನ್ನು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿಯು ಕೂಡ ಇದೆ.

ನಾಗರಪಂಚಮಿಯನ್ನು ಎಲ್ಲೆಡೆ ಸಂಭ್ರಮದಿಂದ ಒಂದೊಂದು ಸಂಪ್ರದಾಯದಲ್ಲಿ ಆಚರಿಸುತ್ತಾರೆ. ಕೆಲವು ಕಡೆ ಹುತ್ತಕ್ಕೆ ಹಾಲೆರೆಯುವ ಮುಖಾಂತರ ಹಬ್ಬವನ್ನು ಆಚರಿಸಿದರೆ, ಇನ್ನು ಕೆಲವೆಡೆ ಅರಿಶಿಣ ಅಥವಾ ರಕ್ತಚಂದನದಲ್ಲಿ ನವನಾಗಗಳ ಆಕೃತಿಗಳನ್ನು ಮಣೆಯ ಮೇಲೆ ಬಿಡಿಸಿ ಆಚರಿಸಲಾಗುತ್ತದೆ. ಹಾಗೆಯೇ ಇನ್ನು ಕೆಲವೆಡೆ ಹುತ್ತದ ಮಣ್ಣನ್ನು ಕೇಸುವಿನ ಮೇಲೆ ಇಟ್ಟು ಹಾಲೆರೆದು ಪೂಜಿಸುವುದರೊಂದಿಗೆ ನಾಗರ ಪ್ರತಿಮೆಗಳಿಗೆ ಹಲೆರೆಯುವಂತಹ ಪದ್ಧತಿಗಳೂ ಇವೆ. ಈ ಎಲ್ಲಾ ಆಚರಣೆಗಾಳೊಂದಿಗೆ ಜೋಕಾಲಿಗಳನ್ನು ಕಟ್ಟಿ ಎಲ್ಲರು ಜೋಕಾಲಿ ಆಡುವುದು ಈ ಹಬ್ಬದ ಇನ್ನೊಂದು ವಿಶೇಷತೆಯಾಗಿದೆ.
ಪಂಚಮಿಯ ಮತ್ತೊಂದು ವಿಶೇಷತೆಯೆಂದರೆ ಹಬ್ಬದ ಸಂದರ್ಭದಲ್ಲಿ ಮದುವೆಯಾದ ಹೆಣ್ಣು ಮಕ್ಕಳು ತವರಿಗೆ ಹೋಗಲು ತುದಿಗಾಲ ಮೇಲೆ ನಿಂತಿರುತ್ತಾರೆ. ಜೊತೆಗೆ ಸಹೋದರರು ಕೂಡಾ ತಮ್ಮ ಸಹೋದರಿಯನ್ನು ತವರಿಗೆ ಕರೆದುಕೊಂಡು ಬರಲು ಹಿಗ್ಗಿನಿಂದ ಹೋಗುತ್ತಾರೆ. ಮದುವೆಯಾದ ಸಹೋದರಿಯನ್ನು ತವರಿಗೆ ಕರೆದುಕೊಂಡು ಬರುವುದು, ಬಾಲ್ಯದ ನೆನಪುಗಳನ್ನು ಅವರ ಜೊತೆ ಮೆಲಕು ಹಾಕುತ್ತಾ, ಜೋಕಾಲಿ ಆಡುತ್ತಾ ಸಂಭ್ರಮದಿಂದ ಹಬ್ಬ ಮಾಡುತ್ತಾರೆ.

ಹಬ್ಬದ ಆಚರಣೆ ಒಂದು ಕಡೆಯಾದರೆ, ಈ ಹಬ್ಬದಲ್ಲಿ ಮಾಡುವ ಅಡುಗೆಯೂ ಬಹಳ ವಿಶೇಷ. ಪ್ರತಿಯೊಂದು ಹಬ್ಬದಲ್ಲೂ ಕೆಲವೊಂದು ಅಡುಗೆಗಳು ವಿಶೇಷವಾಗಿರುತ್ತದೆ. ಹಾಗೆಯೇ ನಾಗರ ಪಂಚಮಿ ದಿನವು ಕೂಡ ಅನೇಕ ಸಿಹಿ ತಿನಿಸುಗಳನ್ನು ಮಾಡುತ್ತಾರೆ. ಅದರಲ್ಲಿ ಪ್ರಮುಖವಾಗಿರುವುದು ಉಂಡೆ. ಶೇಂಗಾ ಉಂಡೆ, ಅಳ್ಳಿಟ್ಟಿನ ಉಂಡೆ, ರವೆ ಉಂಡೆ, ಎಳ್ಳಿನ ಉಂಡೆ ಸೇರಿದಂತೆ ನಾನಾ ಬಗೆಯ ಉಂಡೆಗಳನ್ನು ಮಾಡುತ್ತಾರೆ. ಉಂಡೆ ಜೊತೆ ಉಸುಳಿ ಕೂಡಾ ಮಾಡುತ್ತಾರೆ. ವಿವಿಧ ಕಾಳುಗಳಿಂದ ಉಸುಳಿ ಮಾಡಿ, ಎಳ್ಳು ಹುರಿದು ದೇವರಿಗೆ ನೈವೇದ್ಯ ಮಾಡಿ ನಂತರ ತಾವು ಕೂಡಾ ಸೇವಿಸುತ್ತಾರೆ. ಹೀಗೆ ಬರೀ ಸಾತ್ವಿಕ ಅಡುಗೆಗಳನ್ನೇ ತಯಾರಿಸುವುದು ಇದರ ವಿಶೇಷ.

ನಾಗರ ಪಂಚಮಿಯ ಇನ್ನೊಂದು ವಿಶೇಷವೆಂದರೆ ಜೋಕಾಲಿ ಆಡುವುದು. ಗ್ರಾಮೀಣ ಭಾಗದಲ್ಲಿ ನಾಗರ ಪಂಚಮಿ ದಿನ, ಮನೆಯ ಮುಂದೆ ದೊಡ್ಡ ದೊಡ್ಡ ಮರಗಳಲ್ಲಿ ಜೋಕಾಲಿಗಳು ತೂಗುತ್ತಿರುತ್ತವೆ. ಎಲ್ಲರು ಜೋಕಾಲಿಯನ್ನು ಆಡಿ ಸಂಭ್ರಮಿಸುತ್ತಾರೆ. ಯಾರು ಎಷ್ಟು ದೂರ ಜೀಕುತ್ತಾರೆ ಎಂಬ ಸ್ಪರ್ಧೆಗಳು ಕೂಡಾ ನಡೆಯುತ್ತವೆ. ಇತ್ತ ಹೆಣ್ಣು ಮಕ್ಕಳು ಒಂದು ರೀತಿಯಿಂದ ಸಂಭ್ರಮಸಿದರೆ, ಅತ್ತ ಗಂಡು ಮಕ್ಕಳ ಸಂಭ್ರಮ ಕೂಡಾ ಜೋರಾಗಿರುತ್ತದೆ. ಅನೇಕ ಕಡೆ ಕೋಲಾಟವನ್ನು ಗಂಡು ಮಕ್ಕಳು ಆಡುತ್ತಾರೆ. ಗಂಡು ಮಕ್ಕಳು ಕೋಲಾಟ ಆಡಿ ಸಹೋದರಿಯನ್ನು ರಂಜಿಸುತ್ತಾರೆ. ಹಾಗೆ ಅನೇಕ ಗ್ರಾಮೀಣ ಸ್ಪರ್ಧೆಗಳು ಕೂಡಾ ನಡೆಯುತ್ತವೆ. ಆಧುನಿಕತೆ ಯುಗದಲ್ಲಿ ಗ್ರಾಮೀಣ ಭಾಗದಲ್ಲಿ ಪಂಚಮಿ ದಿನ ಇಂದಿಗೂ ಈ ರೀತಿಯ ಆಚರಣೆಗಳನ್ನು ಗ್ರಾಮೀಣ ಜನರು ನಡೆಸಿಕೊಂಡು ಬರುತ್ತಿರುವುದು ಒಂದು ರೀತಿಯಲ್ಲಿ ಸಂತಸದ ವಿಷಯವಾಗಿದೆ.

– ಕಾವೇರಿ ಎಂ ಎಂ
ಕುವೆಂಪು ವಿಶ್ವವಿದ್ಯಾಲಯ

PHOTO CREDIT  : G.Mohan, Photojournalist, Bengaluru

Gayathri SG

Recent Posts

ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಗೆಳೆಯನಿಂದಲೇ ಕೊಲೆ

ಮದ್ಯ ಸೇವನೆಗೆಂದು ಕರೆದೊಯ್ದು ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

6 mins ago

ಏನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ: ಹೆಚ್.ಡಿ ದೇವೇಗೌಡ

ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ. ಆದ್ರೆ ನೆಲದ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ.…

15 mins ago

ಎವರೆಸ್ಟ್ ಚಿಕನ್ ಮಸಾಲಾ ನಿಷೇದಕ್ಕೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ

ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಬಳಸದಂತೆ ಅಧಿಕಾರಿಗಳಿಂದ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ…

19 mins ago

ಎಚ್.ಡಿ.ಕೋಟೆ: ಕಬಿನಿ ಜಲಾಶಯಕ್ಕೆ ಹಾರಿ ನೌಕರ ಆತ್ಮಹತ್ಯೆ

ಕಬಿನಿ ಜಲಾಶಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

32 mins ago

ಕ್ಯಾಂಟರ್ ಅಡ್ಡಗಟ್ಟಿ ಹತ್ತಿ ವ್ಯಾಪಾರಿಗಳಿಂದ ₹32 ಲಕ್ಷ ದರೋಡೆ

ಕ್ಯಾಂಟರ್ ಅಡ್ಡಗಟ್ಟಿ ಹತ್ತಿ ವ್ಯಾಪಾರಿಗಳಿಂದ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ಅವರ ಬಳಿ ಇದ್ದ ₹32 ಲಕ್ಷವನ್ನು ದೋಚಿಕೊಂಡು…

33 mins ago

ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಬಟ್ಟೆ ತೊಳೆಯಲು ಬಳಕೆ!

ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ…

37 mins ago