ಮಂಗಳೂರು: ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ವತಿಯಿಂದ ‘ಅವಿಷ್ಕಾರ್ 2022′ ಸಾಂಸ್ಕೃತಿಕ ಹಬ್ಬ ಡಿಸೆಂಬರ್ 17 ಹಾಗೂ 18ರಂದು ಬೆಳಗ್ಗೆ 9.30ರಿಂದ ಸಂಜೆ 8.00 ಗಂಟೆಯವರೆಗೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಡಿ. 17 ರಂದು ಬೆಳಗ್ಗೆ 9.30 ಕ್ಕೆ ನಡೆಯಲಿದೆ. ಬಾರೆಟ್ಟೊ ಸ್ಟಾನಿ ಎಜುಕೇಶನ್ಟ್ರಸ್ಟ್ ಸಂಸ್ಥಾಪಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸ್ಟಾನಿ ಬ್ಯಾರೆಟ್ಟೊ ಮುಖ್ಯ ಅತಿಥಿಯಾಗಿ, ಸಂಸ್ಥೆಯ ಹಳೆ ವಿದ್ಯಾರ್ಥಿ, ಚಲನಚಿತ್ರ ನಟ, ಬರಹಗಾರ ಮತ್ತು ನಿರ್ದೇಶಕರಾದ ಸಂದೀಪ್ ಮಲಾನಿ ಗೌರವಾನ್ವಿತ ಅತಿಥಿಯಾಗಿ ಆಗಮಿಸಲಿದ್ದಾರೆ.
ವಿದ್ಯಾ ಸಂಸ್ಥೆಯ ಸಂಚಾಲಕರಾದ ರೆ| ಫಾ| ಬೊನವೆಂಚರ್ ನಝರೆತ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಗಾಯನ, ನೃತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು, 3ರಿಂದ 5 ವರ್ಷ ವಯಸ್ಸಿನ ಪುಟಾಣಿಗಳಿಗಾಗಿ ಬೇಬಿ ಶೋ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಪ್ರದರ್ಶನ ಜರಗಲಿರುವುದು. ಕ್ರಿಸ್ಮಸ್ ಕಾರ್ಯಕ್ರಮ, ಹೌಸಿ ಹೌಸಿ ಸೇರಿದಂತೆ ವಿವಿಧ ಆಟದ ಸ್ಟಾಲುಗಳು ಹಾಗೂ ಬಗೆ ಬಗೆಯ ತಿಂಡಿ ತಿನಸುಗಳು ಲಭ್ಯವಿರುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.