News Karnataka Kannada
Monday, April 29 2024
ಕ್ಯಾಂಪಸ್

‘ಕನ್ನಡ ಕಷ್ಟ’ ಎನ್ನುವ ಅಪಪ್ರಚಾರ ಸಲ್ಲದು: ಪ್ರೊ. ಎನ್. ಎಂ. ತಳವಾರ್

'Kannada is difficult' should not be propagated: Prof. N. M. Talwar
Photo Credit : News Kannada

ಉಜಿರೆ: ಕನ್ನಡ ಓದು ಕುರಿತಂತೆ ಸಂಕುಚಿತ ಮನೋಭಾವ ಹಾಗೂ ಕನ್ನಡ ಕಲಿಕೆ ಕಷ್ಟ ಎನ್ನುವ ಅಪಪ್ರಚಾರ ಸಲ್ಲದು ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇದರ ಯೋಜನಾ ನಿರ್ದೇಶಕ ಪ್ರೊ. ಎನ್. ಎಂ. ತಳವಾರ್ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದಲ್ಲಿ ಆ.18 ನಡೆದ ‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

“ಕವಿವಾಣಿಯಂತೆ ಸುಲಿದ ಬಾಳೆಹಣ್ಣಿನಂತೆ, ಸಿಪ್ಪೆ ಸುಲಿದ ಕಬ್ಬಿನಂತೆ, ಬಿಸಿ ಆರಿದ ಹಾಲಿನಂತೆ ಕನ್ನಡ ಭಾಷೆ ಸುಲಭ-ಸರಳವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ, ಸಂಸ್ಕೃತಿ ದೊಡ್ಡದು. ಆದರೆ, ಪ್ರಸ್ತುತ ಕನ್ನಡ ಓದಿನ ಬಗ್ಗೆ ಸಂಕೋಚ ಪಡುವ ಸ್ಥಿತಿ ನಿರ್ಮಾಣವಾಗಿದೆ. ಸಂಕುಚಿತ ಮನೋಭಾವ ವ್ಯಾಪಕವಾಗುವುದರ ಜತೆಗೆ, ‘ಕನ್ನಡ ಕಷ್ಟ’ ಎನ್ನುವ ಅಪಪ್ರಚಾರವೂ ನಡೆಯುತ್ತಿದೆ” ಎಂದು ಅವರು ಹೇಳಿದರು.

“ಪ್ರಾಚೀನ ಸಾಹಿತ್ಯವಾಗಲಿ, ಅರ್ವಾಚೀನ ಸಾಹಿತ್ಯವಾಗಲಿ, ಆ ಸಾಹಿತ್ಯದಲ್ಲಿ ನಮ್ಮ ಹಿರಿಯರು ದಾರಿ ಮಾಡಿಕೊಂಡು ಸಂತಸಪಟ್ಟರು. ಆ ದಾರಿಯಲ್ಲಿ ನಡೆದು ಸಂತಸಪಡುವ ಅವಕಾಶವನ್ನು ನಾವೇ ದೂರ ಮಾಡಿಕೊಳ್ಳುತ್ತಿದ್ದೇವೆ. ಅವರು ತೋರಿದ ದಾರಿಯಲ್ಲಿ ನಡೆದರೆ ಬದುಕು ಹಸಿರಿನ ಬಯಲಾಗುತ್ತದೆ” ಎಂದ ಅವರು, “ಕುವೆಂಪು ಅವರ ಮಾತಿನಂತೆ ಪ್ರತಿ ವಿದ್ಯಾರ್ಥಿಯೂ ಓರ್ವ ಗೌರವ ತಪಸ್ವಿ. ವಿದ್ಯಾರ್ಥಿ ಜೀವನವು ಚಿಂತನ, ಮನನ, ಧ್ಯಾನದೊಂದಿಗೆ ಸಾಗಬೇಕು. ವಿದ್ಯಾರ್ಥಿಜೀವನವು ತಪಸ್ಸಿನಂತಿದ್ದಾಗ ಬದುಕು ಬಂಗಾರವಾಗುತ್ತದೆ” ಎಂದು ಕಿವಿಮಾತು ಹೇಳಿದರು.

“2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದ್ದು, ಕನ್ನಡದ ಪ್ರಾಚೀನ ಆಕರ ಗ್ರಂಥಗಳು, ಕಾವ್ಯ, ಹಸ್ತಪ್ರತಿ, ಶಾಸನ, ವಾಸ್ತುಶಿಲ್ಪ ಇತ್ಯಾದಿ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಪ್ರಚಾರೋಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹತ್ತು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಚಾರೋಪನ್ಯಾಸವನ್ನು ಪುಸ್ತಕ ರೂಪದಲ್ಲಿ ಹೊರತರುವ ಇರಾದೆ ಇದೆ. ಅದರಂತೆ ನಾಲ್ಕನೇ ಸರಣಿಯ ಕಾರ್ಯಕ್ರಮವನ್ನು ಶಿಸ್ತು, ಬೋಧನೆ ದೃಷ್ಟಿಯಲ್ಲಿ ಶಿಕ್ಷಣ ಪ್ರಿಯರಿಗೆ ಪ್ರಿಯವಾಗಿರುವ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆಸಲಾಗುತ್ತಿದೆ” ಎಂದು ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ, ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ತಾಳ್ತಜೆ ವಸಂತ ಕುಮಾರ ಅವರು ವಿಚಾರ ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅವರು, “ಕನ್ನಡ ನಾಡು, ನುಡಿ, ಭಾಷೆಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸ ತಂದಿದೆ” ಎಂದರು. ಕಾಲೇಜಿನ ಕನ್ನಡ ವಿಭಾಗವು ವಿವಿಧ ಉಪನ್ಯಾಸ, ಕ್ಷೇತ್ರಾಧ್ಯಯನ ಇತ್ಯಾದಿ ಮೌಲಿಕ ಚಟುವಟಿಕೆಗಳನ್ನು ನಡೆಸುತ್ತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಅತಿಥಿಗಳನ್ನು ಗೌರವಿಸಲಾಯಿತು. ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ಕಲಾ ನಿಕಾಯದ ಡೀನ್ ಡಾ. ಶ್ರೀಧರ ಭಟ್, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ನಾಗಣ್ಣ ಡಿ.ಎ. ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು