ಭಾಲ್ಕಿ: ಆರೋಗ್ಯವಂತ ಜೀವನಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತಾಲ್ಲೂಕು ಪತಂಜಲಿ ಸಮಿತಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಮತ್ತು ಇಡೀ ಮನುಕುಲಕ್ಕೆ ಭಾರತ ಯೋಗದ ಮೂಲಕ ಬಹುದೊಡ್ಡ ಕೊಡುಗೆ ನೀಡಿದೆ. ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಒತ್ತು ನೀಡುತ್ತಿಲ್ಲ. ಎಲ್ಲರೂ ಭೌತಿಕ ಸುಖದತ್ತ ಸಾಗಿದ್ದಾರೆ. ಇದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿ ವಿವಿಧ ರೋಗಿಗಳಿಗೆ ತುತ್ತಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಯೋಗದ ಬಗ್ಗೆ ಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಯೋಗ ಭವನಕ್ಕೆ ಮನವಿ: ಪಟ್ಟಣದಲ್ಲಿ ಯೋಗ ಚಟುವಟಿಕೆಗಳು ನಿರಂತರವಾಗಿ ನಡೆಸಲು ಯೋಗ ಭವನ ನಿರ್ಮಿಸಿಕೊಡುವಂತೆ ತಾಲ್ಲೂಕು ಪತಂಜಲಿ ಯೋಗ ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದು, ಯೋಗಕ್ಕೆ ಸೂಕ್ತ ಸ್ಥಳಾವಕಾಶ, ಕಟ್ಟಡ ಇಲ್ಲದೇ ಯೋಗ ಚಟುವಟಿಕೆ ನಡೆಸಲು ಅನಾನುಕೂಲ ಆಗುತ್ತಿದೆ. ಹೀಗಾಗಿ ಯೋಗ ಭವನ ನಿರ್ಮಿಸಬೇಕು ಎಂದು ಶಿವನಾಂದ ಗುಂದಗೆ ಅವರು ಸಚಿವರಿಗೆ ಮನವಿ ಸಲ್ಲಿಸಿದರು

