ಬೀದರ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-65ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಟ್ಯಾಂಕರ್ ಲಾರಿ ಹಾಗೂ ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೀದರ್ ಮೂಲದ ಆರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಮೃತರು ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಕಾರ್ಮಿಕರಾಗಿದ್ದಾರೆ. ತೆಲಂಗಾಣದ ಮೊಗುಡಂಪಲ್ಲಿ ಮಂಡಲದ ಸತ್ವಾರ್ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ನಡೆದಿದೆ. ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಮೃತರನ್ನು ರೇಖಾ, ಶ್ರೀದೇವಿ, ಕವಿತಾ, ನಿಖಿತಾ, ರೇಷ್ಮಾ ಹಾಗೂ ಆಟೋ ಚಾಲಕ ದೇವದಾಸ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ನಿರ್ಮಲಾ, ತುಳಜಮ್ಮ, ಚಂದ್ರಕಲಾ, ರಾಧಿಕಾ, ಶಿಲ್ಪಾ ಹಾಗೂ ಶೋಭಾ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಂಗಾರೆಡ್ಡಿ ಹಾಗೂ ಬೀದರ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ತುಳಜಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.