ಬೀದರ್: ಕಲ್ಯಾಣ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಬೀದರ್ ಕೂಡ ಒಂದು. ಹಲವು ಕಾರಣಗಳಿಗೆ ಬೀದರ್ ಈ ಬಾರಿ ಗಮನ ಸೆಳೆದಿದೆ. ಹಾಲಿ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಅವರಿಗೆ ಕಾಂಗ್ರೆಸ್ ಹುರಿಯಾಳಾದ 26 ವರ್ಷದ ಯುವಕ ಸಾಗರ್ ಖಂಡ್ರೆ ದೇಶದ ಅತಿ ಕಿರಿಯ ಅಭ್ಯರ್ಥಿ ಸವಾಲು ಎಸೆದಿದ್ದಾರೆ.
ಸಾಗರ್ ಖಂಡ್ರೆ ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ ಈಶ್ವರ್ ಖಂಡ್ರೆ ಅವರ ಪುತ್ರ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಜೊತೆಗೆ ತಂದೆ ಈಶ್ವರ್ ಖಂಡ್ರೆ ಅವರ ಆಶೀರ್ವಾದ ಮತ್ತು ಬಲವಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಾಗರ್ ಖಂಡ್ರೆಗೆ ಇದು ಚೊಚ್ಚಲ ಲೋಕಸಭಾ ಚುನಾವಣೆಯಾಗಿದೆ. ಇನ್ನು ಬೀದರ್ ಕ್ಷೇತ್ರದಲ್ಲಿ ಸಾಗರ್ ಖಂಡ್ರೆ ಸತತ ಮುನ್ನಡೆ ಸಾಧಿಸುತ್ತಿದ್ದಾರೆ. ಸಾಗರ್ ಖಂಡ್ರೆ (ಕಾಂಗ್ರೆಸ್)- 252357 ಮತ ಈಗ ಪಡೆದಿದ್ದು ಭಗವಂತ ಖೂಬಾ (ಬಿಜೆಪಿ) 193667 ಮತ ಪಡೆದುಕೊಂಡಿದ್ದಾರೆ. ಈ ಮೂಲಕ 58690 ಮತಗಳ ಅಂತರದಲ್ಲಿದ್ದಾರೆ ಸಾಗರ್ ಖಂಡ್ರೆ.
ಇನ್ನು ಭಗವಂತ್ ಖೂಬಾ ಅವರು 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ ‘ಹ್ಯಾಟ್ರಿಕ್’ ಗುರಿ ಹೊಂದಿದ್ದಾರೆ. ಖೂಬಾ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು, ಬಿಜೆಪಿ ಪಾಳಯದಲ್ಲಿ ಅಸಮಾಧಾನ ಉಂಟಾಗಿತ್ತು. ಆದಾಗ್ಯೂ ಹೈಕಮಾಂಡ್ ಅವರನ್ನೇ ಕಣಕ್ಕಿಳಿಸಿದೆ.

