ಔರಾದ್‌: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸಾರಿಗೆ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಬಸ್‌ ಸಂಪೂರ್ಣವಾಗಿ ಹೊತ್ತಿ ಉರಿದಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ಬೀದರ್‌ನಿಂದ ಔರಾದ್‌ಗೆ ಪ್ರಯಾಣಿಸುತ್ತಿದ್ದ ಬಸ್, ಔರಾದ್ ತಾಲೂಕಿನ ಕಪ್ಪಿಕೆರೆ ಗ್ರಾಮದ ಬಳಿ ತೆರಳುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಮೊದಲಿಗೆ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಇಡೀ ಬಸ್‌ಗೆ ಬೆಂಕಿ ವ್ಯಾಪಿಸಿದೆ.

ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ. ಬಸ್‌ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರಿದ್ದರು. ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಬಸ್‌ ನಲ್ಲಿಸಿದ್ದು, ಪ್ರಯಾಣಿಕರನ್ನು ಬಸ್‌ನಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಬಸ್‌ನಲ್ಲಿದ್‌ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ.

ಔರಾದ್ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ 30ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪವಾನವಿದ್ದು, ತಾಪಮಾನದ ಉಷ್ಣತೆಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.