ಬೀದರ್: ಬಕ್ರೀದ್ ಹಬ್ಬದ ದಿನದಂದೇ ಗೋಹತ್ಯೆ ನಡೆದಿರುವ ಆರೋಪ ಬೀದರ್‌ ಜಿಲ್ಲೆಯ ಹುಲಸೂರು ಪಟ್ಟಣದಲ್ಲಿ ಕೇಳಿಬಂದಿದ್ದು, ಈ ಸಂಬಂಧ ಓರ್ವ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಲಸೂರು ಪಟ್ಟಣದ ಖುರೇಷಿ ಗಲ್ಲಿಯ ನಿವಾಸಿಯಾದ ಗಫರ್ ಖುರೇಷಿ ಎಂಬುವವರಿಗೆ ಸೇರಿದ ಮನೆಯಲ್ಲಿ ಜಾನುವಾರು ಹತ್ಯೆ ಮಾಡಲಾಗುತ್ತಿದೆ ಎಂಬ ಸಂಶಯದ ಮೇರೆಗೆ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಾರ್ವಜನಿಕರಿಂದ ದೂರು ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಹುಲಸೂರು ಠಾಣೆಯ ಪೊಲೀಸರು ತಡಮಾಡದೆ ಜಿಎಫ್‌ ಖುರೇಷಿ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯಲ್ಲಿ ಮಾಂಸದ ತುಂಡುಗಳು ಹಾಗೂ ಜಾನುವಾರು ಹತ್ಯೆಗೆ ಬಳಸಲಾದ ಚಾಕು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹಬ್ಬದ ದಿನದಂದೇ ನಿಷೇಧಿತ ಗೋಹತ್ಯೆ ನಡೆಸಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಜಾನುವಾರು ಹತ್ಯೆ ಮಾಡಿದ ಆರೋಪದಡಿಯಲ್ಲಿ ಸದ್ಯ ಓರ್ವನ ವಿರುದ್ಧ ಹಸು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಹೊಸ ಬಿಎನ್ ಎಸ್ (BNS) ಕಾಯ್ದೆ 2023ರ ಸೆಕ್ಷನ್ 271, 325 ಹಾಗೂ 272ರ ಅಡಿಯಲ್ಲೂ ಹುಲಸೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹೂಡಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.