ಬೀದರ್: ಶಾಲಾ ಕಟ್ಟಡದ ನಾಲ್ಕನೇ ಅಂತಸ್ತಿನಿಂದ ಕೆಳಗೆ ಬಿದ್ದು ಹದಿನೈದು ವರ್ಷದ ಬಾಲಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಎಲ್ಐಸಿ ಕಾಲನಿಯಲ್ಲಿರುವ ಜನಸೇವಾ ಖಾಸಗಿ ಶಾಲೆಯಲ್ಲಿ ನಡೆದಿದೆ.
ಶಾಂತಿನಗರ ನಿವಾಸಿಯಾದ ಸಮೀರ್ (15) ಮೃತಪಟ್ಟ ದುರ್ದೈವಿ. ಈತ ಇದೇ ಜನಸೇವಾ ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಬಾಲಕನ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಶಾಲಾ ಸಿಬ್ಬಂದಿಯೇ ಈತನ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮೃತ ಸಮೀರ್ಗೆ ಶಾಲೆಯ ಸಿಬ್ಬಂದಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆತನ ಪೋಷಕರು ಕಣ್ಣೀರು ಹಾಕಿದ್ದಾರೆ. ತನಗೆ ಶಾಲೆಯಲ್ಲಿ ಆಗುತ್ತಿದ್ದ ಕಿರುಕುಳದ ಬಗ್ಗೆ ಸಮೀರ್ ಈ ಹಿಂದೆಯೇ ಪೋಷಕರ ಬಳಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಎಂದಿನಂತೆ ಇಂದು ಬೆಳಿಗ್ಗೆಯೂ ಸಮೀರ್ ಉತ್ಸಾಹದಿಂದಲೇ ಶಾಲೆಗೆ ಹೋಗಿದ್ದ, ಆದರೆ ಮಧ್ಯಾಹ್ನದ ವೇಳೆಗೆ ಆತ ಹೆಣವಾಗಿ ಮರಳಿದ್ದಾನೆ. ಶಾಲಾ ಮಂಡಳಿಯ ಕಿರುಕುಳ ತಾಳಲಾರದೇ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಬಾಲಕ ಕಟ್ಟಡದಿಂದ ಬಿದ್ದ ತಕ್ಷಣ ಪೋಷಕರಿಗೆ ಯಾವುದೇ ಮಾಹಿತಿ ನೀಡದೆ, ಅವರ ಅನುಮತಿಯನ್ನೂ ಪಡೆಯದೆ ಮೃತದೇಹವನ್ನು ಪೋಸ್ಟ್ಮಾರ್ಟಂಗೆ ಸಾಗಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸದ್ಯ ಬ್ರಿಮ್ಸ್ ಆಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿರುವ ಮೃತನ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಜನಸೇವಾ ಶಾಲಾಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಭೀಕರ ಘಟನೆ ಬೀದರ್ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

