ಬೆಂಗಳೂರು: ಮದ್ಯ ಸೇವಿಸಿ ಹಾದಿ ಬೀದಿಯಲ್ಲಿ ಇಬ್ಬರು ಯುವತಿಯರು ರಂಪಾಟ ನಡೆಸಿದ ಘಟನೆ ಬನ್ನೇರುಘಟ್ಟ ರಸ್ತೆ ಹುಳಿಮಾವು ಬಳಿ ತಡರಾತ್ರಿ ನಡೆದಿದೆ.

ದ್ವಿಚಕ್ರ ವಾಹನದಲ್ಲಿದ್ದ ಯುವತಿಯರು ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಕ್ಯಾಬ್‌ ಚಾಲಕನಿಗೆ ಡಿಕ್ಕಿ ಹೊಡೆದು ಜಗಳ ಮಾಡಿದ್ದಾರೆ. ಕ್ಯಾಬ್‌ ಚಾಲಕ ನಿಮ್ಮದೇ ತಪ್ಪು ಎಂದಿದ್ದಕ್ಕೆ ಮದ್ಯದ ಬೆರಳು ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೆಲ ಕ್ಷಣ ಟ್ರಾಫಿಕ್‌ ಜಾಮ್‌ ಆಗಿ ಜನರು ಸೇರಿದ್ದಾರೆ.

ಜನ ಸೇರುತ್ತಿದ್ದಂತೆ ಸ್ಥಳದಿಂದ ಇಬ್ಬರೂ ಪರಾರಿಯಾಗಲು ಯತ್ನಿಸಿದ್ದಾರೆ. ಪರಾರಿಯಾಗುತ್ತಿದ್ದಂತೆ ಸ್ಥಳೀಯರು ಬೆನ್ನಟ್ಟಿ ಯುವತಿಯರನ್ನು ಹಿಡಿದಿದ್ದಾರೆ. ನಂತರ ಸಾರ್ವಜನಿಕರು ಹುಳಿಮಾವು ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಯುವತಿಯರು ಅಸಭ್ಯ ವರ್ತನೆ ತೋರಿದ್ದಾರೆ. ಇಬ್ಬರು ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.