ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದಂದು ನಾದಿನಿ ಮನೆಗೆ ಕುಂಕುಮಕ್ಕೆ ಎಂದು ಬೈಕ್​ನಲ್ಲಿ ಹೋಗುತ್ತಿದ್ದ ದಂಪತಿಗೆ ಲಾರಿಯೊಂದು ಗುದ್ದಿದ  ಪರಿಣಾಮ ಮಹಿಳೆ ಜೀವ ಕಳೆದುಕೊಂಡಿದ್ದು ಪತಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ.

ಲಗ್ಗೆರೆ ನಿವಾಸಿ ಗೀತಾ (23) ಜೀವ ಕಳೆದುಕೊಂಡ ಮಹಿಳೆ. ಈಕೆಯ ಗಂಡ ಸುನೀಲ್​ಗೆ ಗಾಯಗಳು ಆಗಿವೆ. ಈ ದಂಪತಿ ಕಳೆದ 3 ತಿಂಗಳ ಹಿಂದೆ ಮದುವೆಯಾಗಿದ್ದರು. ಲಗ್ಗೆರೆ ಬಳಿ 1 ವಾರದ‌ ಹಿಂದಷ್ಟೇ ಮನೆ ಮಾಡಿಕೊಂಡಿದ್ದರು.

ಕಳೆದ ಭಾನುವಾರ ಹಾಲು ಉಕ್ಕಿಸಿದ್ದ ಪತಿ-ಪತ್ನಿ ಸಂಭ್ರಮಿಸಿದ್ದರು. ವರಮಹಾಲಕ್ಷ್ಮೀ ಹಬ್ಬಕ್ಕೆ ತವರು ಮನೆಗೆಂದು ಪತ್ನಿಯನ್ನ ಚಂದ್ರ ಲೇಔಟ್​ನಲ್ಲಿರುವ ಅವರ ಅಮ್ಮನ ಮನೆಗೆ ಪತಿ ಕರೆತಂದಿದ್ದರು.  ಲಗ್ಗೆರೆ ಬ್ರಿಡ್ಜ್ ಬಳಿ ಬೈಕ್ ಮತ್ತು 12 ವ್ಹೀಲ್ ಲಾರಿ ನಡುವೆ ಅಪಘಾತವಾಗಿದೆ. ಪ್ರಕರಣ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.