ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಟಾ ಐಪಿಎಲ್ 2025 ಟ್ರೋಫಿ ಗೆದ್ದ ಬಳಿಕ ಅದರ ವಿಜಯೋತ್ಸವ ಬೆಂಗಳೂರಿನ ವಿಧಾನಸೌಧದ ಹೊರಗೆ ನಡೆಯಿತು. ಅದರ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ವಿಜಯೋತ್ಸವ ನಡೆಯಲಿತ್ತು. ಆದರೆ ಜನರ ನೂಕುನುಗ್ಗಲಿನ ಕಾರಣ, ಪರಿಸ್ಥಿತಿಯನ್ನು ನಿಯಂತ್ರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಕ್ರೀಡಾಂಗಣದಲ್ಲಿ ನಡೆಯಲಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಆರಂಭದಲ್ಲಿ ಮಾಹಿತಿ ನೀಡಲಾಯಿತು.

ಆದರೆ ವಿಧಾನಸೌಧದ ಕಾರ್ಯಕ್ರಮದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಕಾರ್ಯಕ್ರಮ ನಡೆಯಿತು. ವಿಧಾನಸೌಧದ ಬಳಿ ಸಾಗರೋಪಾದಿಯಲ್ಲಿ ಜನರ ಆಗಮನದಿಂದ ನಡೆದ ನೂಕುನುಗ್ಗಲಿನಲ್ಲಿ ನಡೆದ ಕಾಲ್ತುಳಿತದಿಂದ ಸುಮಾರು ಹನ್ನೊಂದು ಜನ ಬಲಿಯಾಗಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಕೆಲವರ ಕಾಲು, ಕೈ ಮೂಳೆ ಮುರಿದಿದೆ ಎನ್ನಲಾಗಿದೆ.

18 ಸೀಸನ್ ನಲ್ಲಿ ಪ್ರಥಮ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಆರ್ ಸಿಬಿ ಇಡೀ ಕರ್ನಾಟಕದಲ್ಲಿ ಸಂಭ್ರಮಾಚರಣೆಗೆ ಕಾರಣವಾಗಿದೆ. ಬುಧವಾರ ಈ ಪರಿ ಜನ ಮೊದಲೇ ಸೇರುತ್ತಾರೆ ಎನ್ನುವ ಅನುಮಾನ ಪೊಲೀಸ್ ಇಲಾಖೆಗೆ ಇತ್ತು. ಅದಕ್ಕಾಗಿ ವಿಜೇತ ತಂಡವನ್ನು ಓಪನ್ ಬಸ್ಸಿನಲ್ಲಿ ಮೆರವಣಿಗೆ ಮಾಡುವುದು ಬೇಡಾ ಎನ್ನುವ ಸಲಹೆಯನ್ನು ಸರಕಾರಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ನೀಡಿದ್ದರು. ಅದರಂತೆ ತೆರೆದ ಬಸ್ಸಿನಲ್ಲಿ ಮೆರವಣಿಗೆ ಮಾಡುವ ಕಾರ್ಯಕ್ರಮ ರದ್ದಾಗಿತ್ತು.

ವಿಧಾನಸೌಧದ ಹೊರಗೆ ಮೆಟ್ಟಿಲುಗಳ ಮೇಲೆ ಎಲ್ಲಾ ಆಟಗಾರರನ್ನು ಸನ್ಮಾನಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಮಳೆಯ ಸಿಂಚನ ಆರಂಭವಾದ ಕಾರಣ ಕಾರ್ಯಕ್ರಮವನ್ನು ತರಾತುರಿಯಲ್ಲಿ ಮುಗಿಸಲಾಯಿತು. ಆದರೆ ಈ ನಡುವೆ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿ ಅನೇಕರು ಗಾಯಾಳಾದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಟೀಮ್ ಮ್ಯಾನೇಜಮೆಂಟ್ ಆಯೋಜಿಸಿದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದ್ದರೂ ಎಲ್ಲಾ ಆಟಗಾರರು ಅಲ್ಲಿ ತೆರಳಿ ನೆರೆದಿದ್ದ ಜನರ ಹರ್ಷೋದ್ಘಾರದ ಎದುರು ನಿಂತು ಮಾತನಾಡಿದರು. ಬೌರಿಂಗ್ ಆಸ್ಪತ್ರೆಗೆ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಮುಖಂಡರು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು.

ಜನರು ಮೆಟ್ರೋ ನಿಲ್ದಾಣದಲ್ಲಿ ಸೇರಿ ಅಲ್ಲಿಯೂ ನೂಕುನುಗ್ಗಲು ಆಗುವ ಸಾಧ್ಯತೆ ಇದ್ದ ಕಾರಣ ಮೆಟ್ರೋ ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈ ನಡುವೆ ಮೃತರ ಕುಟುಂಬದವರ ಗೋಳು ಮುಗಿಲು ಮುಟ್ಟಿತ್ತು. ಗಾಯಾಳುಗಳ, ಸಾವಿಗೀಡಾದವರ ಕುಟುಂಬದ ಸದಸ್ಯರು ಬೌರಿಂಗ್ ಆಸ್ಪತ್ರೆಗೆ, ವೈದೇಹಿ ಆಸ್ಪತ್ರೆಗೆ ತೆರಳಿ ಅಲ್ಲಿ ತಮ್ಮವರ ಬಗ್ಗೆ ಆಸ್ಪತ್ರೆಯವರಲ್ಲಿ ವಿಚಾರಿಸುತ್ತಿದ್ದಾರೆ. ಈ ನಡುವೆ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಈ ಒಟ್ಟು ಘಟನೆಗೆ ರಾಜ್ಯ ಸರಕಾರವೇ ನೇರ ಹೊಣೆ ಹೊರಬೇಕಾಗುತ್ತದೆ.

ವಿಧಾನಸೌಧದ ಎದುರು ಕಾರ್ಯಕ್ರಮ ಮಾಡುವುದು ಬೇಡಾ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದರೂ ಕಾರ್ಯಕ್ರಮ ನಡೆಸಲಾಗಿದೆ. ಇಷ್ಟು ದೊಡ್ಡ ಘಟನೆ ಆದ ಬಳಿಕವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಈ ವಿಷಯದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕಿದೆ. ಈ ಸಾವಿನ ಹೊಣೆ ಹೊರುವವರು ಯಾರು ಎನ್ನುವುದನ್ನು ರಾಜ್ಯ ಸರಕಾರ ನಿರ್ಧರಿಸಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮವನ್ನು 15 ನಿಮಿಷದ ಒಳಗೆ ನಿಲ್ಲಿಸುವಂತೆ ವಿನಂತಿಸಿದ್ದೇನೆ, ಹಾಗೆ ಕಾರ್ಯಕ್ರಮ ತಕ್ಷಣ ಮುಗಿಸಲಾಗಿದೆ. ಈ ಒಟ್ಟು ಘಟನೆಗೆ ಪೊಲೀಸರನ್ನು ಹೊಣೆಗಾರ ಮಾಡುವುದಿಲ್ಲ, ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.