ಬೆಂಗಳೂರು: ವಾಟರ್ ಟ್ಯಾಂಕರ್‌ ಬೈಕ್‌ಗೆ ಡಿಕ್ಕಿ ಹೊಡೆದು ಅಕ್ಕ ತಮ್ಮ-ಬಲಿಯಾಗಿರುವ ಘಟನೆ ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ಇಂದು ಬೆಳಗ್ಗೆ ನಡೆದಿದೆ.

ವೇಗವಾಗಿ ಬಂದ ವಾಟರ್ ಟ್ಯಾಂಕರ್, ಬೈಕ್‌ಗೆ ಡಿಕ್ಕಿಯಾಗಿದ್ದರಿಂದ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೊಡ್ಡ ನಾಗಮಂಗಲದ ಕೆಂಪೇಗೌಡ ಬಡಾವಣೆ ನಿವಾಸಿಗಳಾದ ಮಧುಮಿತ (20), ರಂಜನ್(18) ಮೃತರು.

ಬೆಂಗಳೂರಿನ ಎಸ್ಎಸ್ಎಂಆರ್‌ವಿ ಕಾಲೇಜಿನಲ್ಲಿ ಮಧುಮಿತ ವ್ಯಾಸಂಗ ಮಾಡುತ್ತಿದ್ದಳು. ಮೊದಲ ದಿನ ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ತಮ್ಮ ಹೋಗಿದ್ದ. ಈ ವೇಳೆ ಕಿಲ್ಲರ್ ವಾಟರ್ ಟ್ಯಾಂಕರ್ ಇಬ್ಬರನ್ನೂ ಬಲಿ ಪಡೆದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೈಕ್‌ ಮಿರರ್‌ಗೆ ವೇಗವಾಗಿ ಬಂದ ವಾಟರ್ ಟ್ಯಾಂಕರ್ ಡಿಕ್ಕಿಯಾಗುತ್ತಲೇ ಅಕ್ಕ-ತಮ್ಮ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಮೇಲೆ ಟ್ಯಾಂಕರ್ ಹಿಂಬದಿ ಚಕ್ರ‌ ಹರಿದು ದುರಂತ ಸಂಭವಿಸಿದೆ.

ವಾಟರ್ ಟ್ಯಾಂಕರ್ ಚಾಲಕನ ಅತಿ ವೇಗ, ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.