ಬೆಂಗಳೂರು: ಕೇಂದ್ರ ಅಪರಾಧ ವಿಭಾಗ ಮತ್ತು ನಗರದ ವಿವಿಧ ಠಾಣೆಗಳ ಪೊಲೀಸರ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ದೆಹಲಿ ಮತ್ತು ರಾಜಸ್ಥಾನದಿಂದ ರೈಲಿನಲ್ಲಿ ಮಹಿಳೆಯರ ಚೂಡಿದಾರ, ನೈಟಿಯಲ್ಲಿ ಮರೆಮಾಚಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ್ದು, 30.58 ಕೋಟಿ ರೂ.ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ಜಪ್ತಿ ಮಾಡಿ, 17 ಮಂದಿಯನ್ನು ಬಂಧಿಸಿದ್ದಾರೆ.
ಸಿಸಿಬಿ ಮಾದಕ ವಸ್ತು ನಿಗ್ರಹ ದಳ, ಚಾಮರಾಜಪೇಟೆ, ಕೋರಮಂಗಲ, ಬಾಣಸವಾಡಿ, ವೈಟ್‌ಫೀಲ್ಡ್, ಮಲ್ಲೇಶ್ವರ ಹಾಗೂ ಪುಲಕೇಶಿನಗರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ, ದೆಹಲಿ ಮೂಲದ ಖಾಲಿಮ್ (19), ಕನ್ನಯ್ಯ(20), ಸತ್ಯಂ(19), ಶಾಹಿಲ್ ಕುಮಾರ್ (22), ರಾಜಸ್ಥಾನದ ಲುಂಬಾರಂ ವಿಷ್ಣೋಯಿ (25), ಅನುಪ್ ರಾಮ್ ಚೌದರಿ (23) ಸೇರಿ ಕೇರಳ, ತಮಿಳುನಾಡು ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳಾದ 13 ಕೆ.ಜಿ 135 ಗ್ರಾಂ ಎಂಡಿಎಂಎ, 181.3 ಗ್ರಾಂ ಕೋಕೇನ್, 15 ಗ್ರಾಂ ಹೆರಾಯಿನ್, 59.322 ಕೆ.ಜಿ ಗಾಂಜಾ, 7 ಕೆ.ಜಿ ಅಫೀಮು, 225 ಗ್ರಾಂ ಮೆಫೆಡ್ರೋನ್, 6 ಮೊಬೈಲ್ ಪೋನ್, 1 ಕಾರು, 1 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಯಾಣಿಕರ ಹಾಗೂ ವ್ಯಾಪಾರಿಗಳ ಸೋಗಿನಲ್ಲಿ ದೆಹಲಿ, ರಾಜಸ್ಥಾನ, ಒಡಿಶಾ ರಾಜ್ಯಗಳಿಂದ ಬೆಂಗಳೂರಿಗೆ ಬರುತ್ತಿದ್ದ ಪೆಡ್ಲರ್ಸ್‌ಗಳು ಚೂಡಿದಾರ ಮತ್ತು ನೈಟಿಗಳ ಮೂಟೆಯಲ್ಲಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದರು. ವಾರದ ಹಿಂದೆ 10 ಕೆ.ಜಿ. ಡ್ರಗ್ಸ್ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ತನಿಖೆ ವೇಳೆ ದೆಹಲಿಯಿಂದ ಬೆಂಗಳೂರು ನಗರಕ್ಕೆ ಡ್ರಗ್ಸ್ ಸಾಗಣೆಯಾಗುತ್ತಿರುವುದನ್ನು ಪತ್ತೆ ಮಾಡಿತ್ತು. ಪೆಡ್ಲರ್ಸ್‌ಗಳ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ್ದ ಅಧಿಕಾರಿಗಳು ದೆಹಲಿ ಸೇರಿ ವಿವಿಧ ರಾಜ್ಯಗಳ ಆರೋಪಿಗಳು ಪಾಲ್ಗೊಂಡಿರುವುದನ್ನು ಪತ್ತೆ ಮಾಡಿದೆ ಎಂದು ಪೊಲೀಸರು ಹೇಳಿದರು.

