ಬೆಂಗಳೂರು: ಮುಂದಿನ ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ವಂದೇ ಭಾರತ್ ಸ್ಲೀಪರ್ ರೈಲುಗಳು ಸಂಚಾರ ಆರಂಭವಾಗಲಿದೆ. ತಡರಾತ್ರಿಯೂ ಸಂಚರಿಸಲಿರುವ ಬಹುನಿರೀಕ್ಷಿತ ‘ವಂದೇ ಭಾರತ್‌ ಸ್ಲೀಪರ್‌ ರೈಲ’ನ್ನು ಅನಾವರಣಗೊಳಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಮುಂದಿನ ಮೂರು ತಿಂಗಳಲ್ಲಿ ಈ ರೈಲು ಪ್ರಯಾಣಿಕ ಸಂಚಾರ ಸೇವೆ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.

ಪ್ರೊಟೊಟೈಪ್‌ ರೈಲುಗಳ ತಪಾಸಣೆ ಪೂರ್ಣಗೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳನ್ನು ನಿರ್ಮಿಸಲಾಗುವುದು. ಮುಂದಿನ ಒಂದೂವರೆ ವರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ರೈಲುಗಳ ನಿರ್ಮಾಣ ಆರಂಭವಾಗಲಿದೆ. ಬಳಿಕ ತಿಂಗಳಿಗೆ ಎರಡರಿಂದ ಮೂರು ರೈಲುಗಳು ಸಂಚಾರಕ್ಕೆ ಸಿದ್ಧವಾಗಲಿವೆ’ ಎಂದು ತಿಳಿಸಿದರು.

ವಂದೇ ಭಾರತ್ ಸ್ಲೀಪರ್‌ ವಿಶೇಷ: ಐಷಾರಾಮಿ ಏರ್‌ಕ್ರಾಫ್ಟ್‌ ಮಾದರಿಯ ಸೌಲಭ್ಯವನ್ನು ಹೊಂದಿರುವ ರೈಲು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. 800ರಿಂದ 1200 ಕಿ.ಮೀ.ವರೆಗೂ ಸಂಚರಿಸಲಿದೆ. ನಿದ್ರಿಸಲು ಆರಾಮದಾಯಕ ಮಂಚ, ವಿಶಾಲವಾದ ಸ್ಥಳಾವಕಾಶ, ಗಾಳಿ ಬೆಳಕು ಹೊಂದಿದೆ. ಯುಎಸ್‌ಬಿ, ಚಾರ್ಜಿಂಗ್‌ ವ್ಯವಸ್ಥೆ, ಮೊಬೈಲ್‌, ಮ್ಯಾಗ್ಸಿನ್‌ ಹೋಲ್ಡರ್‌, ಸ್ನ್ಯಾಕ್‌ ಟೇಬಲ್‌ ಇದೆ. ಬಿಸಿನೀರು ಸ್ನಾನದ ವ್ಯವಸ್ಥೆ ಇದೆ.

ವಿಶೇಷವಾಗಿ ಡ್ರೈವಿಂಗ್‌ ಟ್ರೈಲರ್‌ ಬೋಗಿಯಲ್ಲಿ ಆರ್‌ಪಿಎಫ್‌ ಸೇರಿ ಭದ್ರತಾ ಸಿಬ್ಬಂದಿಯ ಶ್ವಾನದಳ ತಂಗಲು ‘ಡಾಗ್‌ ಬಾಕ್ಸ್’ ಇಡಲಾಗಿದೆ. ಅಗತ್ಯವಿದ್ದರೆ ಪ್ರಯಾಣಿಕರ ಸಾಕುನಾಯಿಗೂ ಇದನ್ನು ಕೊಡಲಾಗುತ್ತದೆ. ಅಂಗವಿಕಲ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಶೌಚಾಲಯವೂ ಇದೆ. ಆಟೋಮೆಟಿಕ್‌ ಡೋರ್‌, ಸೆನ್ಸರ್‌ ಆಧಾರಿತ ಅಂತರ್‌ ಸಂವಹನ ವ್ಯವಸ್ಥೆ, ಅಗ್ನಿ ಸುರಕ್ಷತಾ ಬಾಗಿಲು, ಲಗೇಜ್‌ ರೂಂ, ಓದಲು ದೀಪ, ರಾತ್ರಿಯಲ್ಲಿ ದೀಪ ಬಂದ್‌ ಆಗಿರುವಾಗ ಶೌಚಾಲಯಕ್ಕೆ ಹೋಗುವ ಪ್ರಯಾಣಿಕರಿಗೆ ಏಣಿಯ ಕೆಳಗೆ ಎಲ್‌ಇಡಿ ಲೈಟ್‌ ಕೊಡಲಾಗಿದೆ.