ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಕೇಸ್‌ಗೆ ಸಂಬಂಧಿಸಿ ಮತ್ತೊಬ್ಬನನ್ನು ಎಸ್ಐಟಿ ಬಂಧಿಸಿದೆ. ಆಂಧ್ರ ಮೂಲದ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಈತ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.

ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಜೊತೆ ಸತತ ಸಂಪರ್ಕದಲ್ಲಿದ್ದ ಈ ಆರೋಪಿ ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಸಹಕಾರ ನೀಡಿದ್ದ. ಇದೇ ರೀತಿ ಈ ಹಿಂದೆಯೂ ಈ ಆರೋಪಿಗಳು ಕೃತ್ಯ ಎಸಗಿದ್ದರು. ಛತ್ತೀಸ್‌ಗಢದಲ್ಲಿ ಸತ್ಯನಾರಾಯಣ ವರ್ಮಾ ಹಾಗೂ ಶ್ರೀನಿವಾಸ ರಾವ್ ಸೇರಿ ಇಂಥದೇ ಕೃತ್ಯ ಎಸಗಿದ್ದಾರೆ. ಅದೇ ರೀತಿ ನಿಗಮದ ಅಕೌಂಟ್‌ನಿಂದ ಹಣ ಅಕ್ರಮ ವರ್ಗಾವಣೆ ಮಾಡಿದ್ದರು.

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶ್ರೀನಿವಾಸ ರಾವ್ ಎಸ್ಕೇಪ್ ಆಗಿದ್ದ. ಇದೀಗ ಎಸ್‌ಐಟಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ಸದ್ಯ ಆರೋಪಿಯನ್ನು ಒಂಬತ್ತು ದಿನ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.