ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಆರಂಭವಾಗಿ ನಾಳೆಗೆ (ಬುಧವಾರ) ಒಂದು ವರ್ಷ ಆಗಲಿದೆ. ಈ ಅವಧಿಯಲ್ಲಿ 225 ಕೋಟಿ ಮಹಿಳೆಯರು ಉಚಿತವಾಗಿ ನಾಲ್ಕು ನಿಗಮದ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ.
ನಾಲ್ಕು ನಿಗಮಕ್ಕೆ ಬರೋಬ್ಬರಿ 5481 ಕೋಟಿ ರೂಪಾಯಿ ಆದಾಯ ಬಂದಿದೆ. ಕೆಎಸ್‌ಆರ್‌ಟಿಸಿ ಒಂದರಲ್ಲೇ 68 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದರೆ, ಬಿಎಂಟಿಸಿಯಲ್ಲಿ 71 ಕೋಟಿ, ಕೆಕೆಆರ್ಟಿಸಿ- ಎನ್ಡಬ್ಲ್ಯುಕೆಆರ್ಟಿಸಿಯಲ್ಲಿ 85 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.
ನಾಲ್ಕು ನಿಗಮಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಆರ್ಥಿಕವಾಗಿ ನಷ್ಟದಲ್ಲಿದ್ದ ನಿಗಮಕ್ಕೆ ಶಕ್ತಿ ಯೋಜನೆಯಿಂದ ದೊಡ್ಡ ಮಟ್ಟದಲ್ಲಿ ಲಾಭವಾಗಿದೆ.
ಕೆಎಸ್ಆರ್ಟಿಸಿಗೆ 2070 ಕೋಟಿ ರೂಪಾಯಿ ಆದಾಯ ಬಂದಿದ್ದರೆ, ಬಿಎಂಟಿಸಿಗೆ 937 ಕೋಟಿ ರೂಪಾಯಿ, ಕೆಕೆಆರ್ಟಿಸಿ- ಎನ್ಡಬ್ಲ್ಯುಕೆಆರ್ಟಿಸಿಗೆ ಸೇರಿ ಒಟ್ಟು 2472 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಯೋಜನೆಯ ಪರಿಣಾಮವಾಗಿ 2023-24ನೇ ಸಾಲಿನಲ್ಲಿ 3,930 ಕೋಟಿ ರೂ. ಆದಾಯವನ್ನು ಕೆಎಸ್‌ಆರ್‌ಟಿಸಿ ಗಳಿಸಿತ್ತು.

