ಬೆಂಗಳೂರು: ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಮೂವರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತರನ್ನು ಉತ್ತರ ಪ್ರದೇಶ ಮೂಲದ ಅಕ್ಬರ್​ (38), ಪತ್ನಿ ಮುಬೀನಾ (32) ಹಾಗೂ ಸೋನು ಯಾದವ್​ (39) ಎಂದು ಗುರುತಿಸಲಾಗಿದೆ. ಮೂವರು ವಿಮಾನದಲ್ಲಿ ಬೆಂಗಳೂರಿಗೆ ಬಂದು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್​​ ಮಾಡುತ್ತಿದ್ದರು. ಬಳಿಕ ಮನೆಗಳ್ಳತನ ಮಾಡುತ್ತಿದ್ದರು. ಕೊನೆಗೂ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30.50 ಲಕ್ಷ ರೂಪಾಯಿ ಮೌಲ್ಯದ 405 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಮೇ 10ರಂದು ಎಇಸಿಎಸ್​​ ಲೇಔಟ್​​​​​ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು. ಹಾಡು ಹಗಲೇ ಮನೆಯಲ್ಲಿದ್ದ ಆಭರಣಗಳನ್ನು ಕಳ್ಳರು ದೋಚಿದ್ದರು. ಬೀಗ ಮುರಿದು ಎಲ್ಲವನ್ನು ಕಳವು ಮಾಡಿದ್ದರು. ಈ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ದಾಖಲಾದ ದೂರಿನ ಮೇರೆಗೆ ಇನ್ಸ್​​ಪೆಕ್ಟರ್​​ ಭಾಗ್ಯವತಿ ಜೆ.ಬಂಟ ನೇತೃತ್ವದಲ್ಲಿ ಕಳ್ಳರನ್ನು ಹುಡುಕಲಾಗಿದೆ. ಈ ವೇಳೆ ಅಲ್ಲಿನ ಕಟ್ಟಡಗಳ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಲಾಗಿದೆ.

ಸಿಸಿಟಿವಿ ದೃಶ್ಯದಲ್ಲಿ ಸುಳಿವೊಂದು ಸಿಕ್ಕಿದ್ದು, ಅದರ ಬೆನ್ನಟ್ಟಿದ ಪೊಲೀಸರಿಗೆ ಆರೋಪಿ ಸೋನು ಯಾದವ್​ ಮೆಜೆಸ್ಟಿಕ್​​ ಬಸ್​ ನಿಲ್ದಾಣದಲ್ಲಿ ಇರೋದು ಪತ್ತೆಹಚ್ಚಿ ಅರೆಸ್ಟ್ ಮಾಡುತ್ತಾರೆ. ನಂತರ ಆತನ ವಿಚಾರಣೆ ಮಾಡಿದಾಗ ಬಾಯಿ ಬಿಟ್ಟಿದ್ದಾನೆ. ಸೋನು ಬಾಯಿಬಿಟ್ಟ ಸಂಗತಿ ಆಧಾರದ ಮೇಲೆ ಪೊಲೀಸರು ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆಯುತ್ತಾರೆ. ಈ ವೇಳೆ ಅಕ್ಬರ್​ ಮತ್ತು ಮುಬೀನಾಳನ್ನು ಬಂಧಿಸುತ್ತಾರೆ. ಬಂಧಿತರು ಗಾಜಿಯಾಬಾದ್​​ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಾರೆ. ಇನ್ನು ಬಂಧಿತ ಮೂವರು ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ಗುಜರಾತ್​​​ ಸೇರಿ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದಾರೆ.