ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನೇ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಂದ್ರಾಲೇಔಟ್‌ ನಿವಾಸಿ ಅಯೂಬ್‌ ಖಾನ್‌ (26) ಬಂಧಿತ. ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ 4 ಕೆಟಿಎಂ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿ ನ.28ರಂದು ಈಡಿಗರ ಬೀದಿಯ ನಿವಾಸಿಯೊಬ್ಬರು ತಮ್ಮ ಮನೆಯ ಮುಂಭಾಗ ನಿಲುಗಡೆ ಮಾಡಿದ್ದ ಕೆಟಿಎಂ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದರು.

ಮರು ದಿನ ನೋಡಿದಾಗ ದ್ವಿಚಕ್ರ ವಾಹನ ಇರಲಿಲ್ಲ. ಈ ಬಗ್ಗೆ ವಾಹನ ಮಾಲಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಿ ಬ್ಯಾಟರಾಯನಪುರದ ಟೆಂಟ್‌ಹೌಸ್‌‍ ಬಳಿ ಬಂಧಿಸಿ ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ನಗರದ ವಿವಿಧ ಕಡೆಗಳಲ್ಲಿಯೂ ಸಹ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಕಂಬಿಪುರದಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ಆರೋಪಿ ತಿಳಿಸಿದ್ದು, ಆ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ವಿರುದ್ಧ ಕುಂಬಳಗೋಡು, ಎಚ್‌ಎಎಲ್‌, ಬ್ಯಾಟರಾಯನಪುರ ಹಾಗೂ ವಿಜಯನಗರ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿದ್ದ ತಲಾ 1 ಪ್ರಕರಣ ಪತ್ತೆಯಾಗಿದೆ.

ಕಳವು ಕೆಟಿಎಂ ಬೈಕ್‌ಗಳನ್ನು ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.